ಮಾ. 15, 16ರಂದು ದೇಶಾದ್ಯಂತ ಬ್ಯಾಂಕ್​ಗಳ ಮುಷ್ಕರ; ಖಾಸಗೀಕರಣಕ್ಕೆ ವಿರೋಧ

Bank Strike
Published on

ನವದೆಹಲಿ: ಕೇಂದ್ರ ಬಜೆಟ್​ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಬ್ಯಾಂಕ್​ಗಳ ಖಾಸಗೀಕರಣ ಕುರಿತು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಬ್ಯಾಂಕ್​ ಅಧಿಕಾರಿ-ಸಿಬ್ಬಂದಿ ಈಗ ಖಾಸಗೀಕರಣ ವಿರೋಧಿಸಿ ಮುಷ್ಕರ ಕೈಗೊಳ್ಳಲು ಮುಂದಾಗಿದ್ದಾರೆ.

ಸಾರ್ವಜನಿಕ ವಲಯದ ಬ್ಯಾಂಕ್​ಗಳ ಖಾಸಗೀಕರಣ ಕುರಿತು ಬಜೆಟ್​ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್​ ಪ್ರಸ್ತಾಪಿಸಿರುವುದನ್ನು ವಿರೋಧಿಸಿ ಯುನೈಟೆಡ್​ ಫೋರಂ ಆಫ್​ ಬ್ಯಾಂಕ್ ಯೂನಿಯನ್ಸ್​(ಯುಎಫ್​ಬಿಯು) ರಾಷ್ಟ್ರವ್ಯಾಪಿ ಬಂದ್​ಗೆ ಕರೆ ನೀಡಿದೆ. ಹೈದರಾಬಾದ್​ನಲ್ಲಿ 9 ಬ್ಯಾಂಕ್ ಸಂಘಟನೆಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆಲ್​ ಇಂಡಿಯಾ ಬ್ಯಾಂಕ್​ ಎಂಪ್ಲಾಯಿಸ್​ ಅಸೋಸಿಯೇಷನ್​ (ಎಐಬಿಇಎ) ಜತೆಗೆ ಎಐಬಿಒಸಿ, ಎನ್​ಸಿಬಿಇ, ಎಐಬಿಒಎ, ಬಿಇಎಫ್​ಐ, ಐಎನ್​ಬಿಇಎಫ್​, ಐಎನ್​ಬಿಒಸಿ, ಎನ್​ಒಬಿಡಬ್ಲ್ಯು ಮತ್ತು ಎನ್​ಒಬಿಒ ಮುಂತಾದ ಸಂಘಟನೆಗಳು ಒಗ್ಗೂಡಿ ಈ ಬಂದ್​ಗೆ ನಿರ್ಧರಿಸಿವೆ.

ಹೈದರಾಬಾದ್​ನಲ್ಲಿ ನಡೆದ ಸಭೆಯಲ್ಲಿ ಬಜೆಟ್​ನಲ್ಲಿ ಪ್ರಸ್ತಾಪಿಸಲಾಗಿರುವ ಐಡಿಬಿಐ ಬ್ಯಾಂಕ್​ ಹಾಗೂ ಇನ್ನೂ ಎರಡು ಸಾರ್ವಜನಿಕ ಕ್ಷೇತ್ರದ ಬ್ಯಾಂಕ್​ಗಳ ಖಾಸಗೀಕರಣ, ಎಲ್​ಐಸಿ ಬಂಡವಾಳ ಹಿಂದೆಗೆತ, ಜನರಲ್​ ಇನ್ಶೂರೆನ್ಸ್ ಕಂಪನಿ ಖಾಸಗೀಕರಣ ಇತ್ಯಾದಿಗಳು ಸಾರ್ವಜನಿಕ ಕ್ಷೇತ್ರದ ಕಂಪನಿಗಳಿಗೆ ಮಾರಕ. ಇವುಗಳೆಲ್ಲದರ ವಿರುದ್ಧ ಮಾ. 15 ಮತ್ತು 16ರಂದು ದೇಶವ್ಯಾಪಿ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದು ಎಐಬಿಇಎ ಪ್ರಧಾನ ಕಾರ್ಯದರ್ಶಿ ವೆಂಕಟಾಚಲಂ ಹೇಳಿದ್ದಾರೆ.

ಫೆ. 19ರಂದು ಎಲ್ಲ ರಾಜ್ಯಗಳ ರಾಜಧಾನಿಯಲ್ಲಿ ಧರಣಿ ನಡೆಸಲಾಗುವುದು. ಬಳಿಕ ಫೆ. 20ರಿಂದ ಮಾ. 10ರವರೆಗೆ ಎಲ್ಲ ರಾಜ್ಯ, ಜಿಲ್ಲೆ, ನಗರಗಳಲ್ಲಿ ಧರಣಿಗಳನ್ನು ನಡೆಸಿ, ಮಾರ್ಚ್​ 15 ಮತ್ತು 16ರಂದು ಎರಡು ದಿನಗಳ ಕಾಲ ದೇಶಾದ್ಯಂತ ಬ್ಯಾಂಕ್ ಮುಷ್ಕರ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net