ನಲಿ-ಕಲಿ ತರಗತಿ ಕೊಠಡಿಯಲ್ಲಿ 6.5 ಅಡಿ ಉದ್ದದ ನಾಗಪ್ಪ ಪ್ರತ್ಯಕ್ಷ! ಬೆಚ್ಚಿಬಿದ್ದ ವಿದ್ಯಾರ್ಥಿಗಳು | Cobra

ವಿಜಯವಾಣಿ (6)
Published on

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಸರ್ಕಾರಿ ಶಾಲೆಯೊಂದರ ತರಗತಿ ಕೊಠಡಿಯೊಳಗೆ 6.5 ಅಡಿ ಉದ್ದದ ನಾಗರಹಾವು (Cobra) ಪ್ರತ್ಯಕ್ಷವಾಗಿದ್ದು, ವಿದ್ಯಾರ್ಥಿಗಳನ್ನು ಬೆಚ್ಚಿಬೀಳಿಸಿದೆ.

ಬಿಸಿಯೂಟ ಸೇವಿಸಲು ಕೊಠಡಿಗೆ ಬಂದ 3ನೇ ತರಗತಿ ವಿದ್ಯಾರ್ಥಿನಿ ಹಾವು ಇರುವುದನ್ನು ಪತ್ತೆ ಹಚ್ಚಿರುವುದು ತಡವಾಗಿ ಬೆಳಕಿಗೆ ಬಂದಿದೆ. ಹನೂರು ತಾಲೂಕಿನ ಅಜ್ಜೀಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಲಿ-ಕಲಿ ಕೊಠಡಿಯಲ್ಲಿ ಬಾರಿ ಗಾತ್ರದ ನಾಗರಹಾವು ಕಾಣಿಸಿಕೊಂಡಿದೆ. ಮೋನಿಕಾ ಎಂಬ 3ನೇ ತರಗತಿ ವಿದ್ಯಾರ್ಥಿನಿ, ತಟ್ಟೆಗೆ ಬಿಸಿಯೂಟವನ್ನು ಹಾಕಿಸಿಕೊಂಡು ಕೊಠಡಿಗೆ ಆಗಮಿಸಿ ಊಟಕ್ಕೆ ಕುಳಿತಿದ್ದಳು. ಈ ವೇಳೆ ತೆರೆದ ಅಲ್ಮೇರಾದಲ್ಲಿ ಸುಮಾರು ಆರೂವರೆ ಅಡಿ ಉದ್ದದ ನಾಗರಹಾವು ಕಾಣಿಸಿಕೊಂಡು ಬುಸುಗುಟ್ಟಿದೆ.

ಇದರಿಂದ ಗಾಬರಿಗೊಂಡು ಕಿರುಚುತ್ತಾ ಕೊಠಡಿಯಿಂದ ಹೊರಬಂದ ಮೋನಿಕಾ ವಿಷಯವನ್ನು ಶಿಕ್ಷಕರಿಗೆ ಮುಟ್ಟಿಸಿದ್ದಾಳೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಶಿಕ್ಷಕರ ವರ್ಗ ನಾಗರಹಾವನ್ನು ನೋಡಿ ಗ್ರಾಮದ ಸ್ನೇಕ್ ಮಧುಗೆ ಮಾಹಿತಿ ತಿಳಿಸಿದ್ದಾರೆ. ಕರೆಯ ಬೆನ್ನಲ್ಲೇ ಶಾಲೆಗೆ ಆಗಮಿಸಿದ ಮಧು ಕಾರ್ಯಾಚರಣೆ ನಡೆಸಿ, ಸರ್ಪವನ್ನು ಸುರಕ್ಷಿತವಾಗಿ ಹಿಡಿದು ಮಲೆಮಹದೇಶ್ವರ ವನ್ಯಜೀವಿ ವಲಯದ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net