ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಡಿ.೩೧ ರಿಂದ ಬಸ್ ಸಂಚಾರ ಸ್ಥಗಿತ / ಅನಿರ್ಧಿಷ್ಟ ಮುಷ್ಕರ / ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸರ್ಕಾರಕ್ಕೆ ಎಚ್ಚರಿಕೆ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಸಾರಿಗೆ ನೌಕರರಿಗೆ ಪರಿಷ್ಕೃತ ವೇತನ ಜಾರಿ, ವೇತನ ಹಿಂಬಾಕಿ ಹಾಗೂ ನಿಗಮಗಳಿಗೆ ಶಕ್ತಿ ಯೋಜನೆ ಬಾಕಿ ಹಣ ಬಿಡುಗಡೆಗೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರು ಅನಿರ್ದಿಷ್ಟ ಮುಷ್ಕರ ನಡೆಸಲಿದ್ದು, ಡಿ.೩೧ರ ಬೆಳಿಗ್ಗೆ ೬ ಗಂಟೆಯಿAದಲೇ ಬಸ್ ಸಂಚಾರ ಸ್ಥಗಿತಗೊಳ್ಳಲಿದೆ ಎಂದು ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮುಖಂಡರು ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ರಾಜ್ಯ ಮುಖಂಡ ನಾರಾಯಣಸ್ವಾಮಿ, ರಾಜ್ಯ ಸರ್ಕಾರವು ಸಾರಿಗೆ ನೌಕರರ ೩೨ ಬೇಡಿಕೆಗಳನ್ನು ಈಡೇರಿಸಬೇಕಿದೆ. ಈ ಸಂಬAಧ ಹಲವಾರು ಬಾರಿ ಮನವಿ ಮಾಡಿದರೂ ಸರ್ಕಾರ ಕ್ರಮ ವಹಿಸಿಲ್ಲ. ಸಾರಿಗೆ ಸಚಿವ ರಾಮಲಿಂಗಾರಡ್ಡಿ ಸ್ಪಂದಿಸಿಲ್ಲ. ಹೀಗಾಗಿ ಅನಿವಾರ್ಯವಾಗಿ ಮುಷ್ಕರ ನಡೆಸಬೇಕಾಗಿದೆ. ಡಿ.೩೧ರಿಂದ ಯಾವುದೇ ಸಾರಿಗೆ ಬಸ್‌ಗಳ ಸಂಚಾರ ಇರುವುದಿಲ್ಲ. ನಮ್ಮ ಸಮಸ್ಯೆ ಅರಿತು ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದರು.

ಸಾರಿಗೆ ನೌಕರರು ಸರ್ಕಾರದ ಮಹಾತ್ವಕಾಂಕ್ಷಿ ಶಕ್ತಿ ಯೋಜನೆಯನ್ನು ಸಮರ್ಪಕವಾಗಿ ನಿಭಾಯಿಸಿದ್ದಾರೆ. ಆದರೆ, ಸಾರಿಗೆ ನಿಗಮಗಳಿಗೆ ಆ ಹಣ ಬಿಡುಗಡೆ ಮಾಡಿಲ್ಲ ಎಂದರು.

ಕ್ರಿಯಾ ಸಮಿತಿಯ ಪದಾಧಿಕಾರಿ ಬಾಲಕೃಷ್ಣ ಮಾತನಾಡಿ, ೨೦೨೦ ರ ಜ. ೧ ರಿಂದಲೇ ವೇತನ ಪರಿಷ್ಕರಣೆ ಆಗಿಬೇಕಿತ್ತು. ಆದರೆ, ಕೋವಿಡ್ ಕಾರಣ ಜಾರಿ ಆಗಲಿಲ್ಲ. ೨೦೨೪ರ ಜನವರಿ ೧ರಿಂದ ಹೊಸ ವೇತನ ಪರಿಷ್ಕರಣೆ ಆಯಿತು. ಪರಿಷ್ಕರಣೆ ವೇತನ ಜಾರಿ ಜೊತೆಗೆ ೩೮ ತಿಂಗಳ ವೇತನ ಹಿಂಬಾಕಿ ಪಾವತಿಸಬೇಕು ಎಂದು ಒತ್ತಾಯಿಸಿದರು.

ಶಕ್ತಿ ಯೋಜನೆ ಜಾರಿಗೆ ಸಾರಿಗೆ ಸಿಬ್ಬಂದಿ ಶ್ರಮ ಅಪಾರ. ಆದರೆ, ನೌಕರರನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಈಗ ಕರೆದರೂ ನಾವು ಚರ್ಚೆಗೆ ಸಿದ್ಧವಿದ್ದೇವೆ. ಬೇಡಿಕೆ ಈಡೇರಿಸಿದರೆ ಮುಷ್ಕರ ವಾಪಸ್ ಪಡೆಯುತ್ತೇವೆ ಎಂದರು.

ಕ್ರಿಯಾ ಸಮಿತಿ ಪದಾಧಿಕಾರಿ ಆರ್.ಪ್ರಸಾದ್ ಮಾತನಾಡಿ, ಮುಷ್ಕರ ನಡೆಸುವ ಬಗ್ಗೆ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯು ಡಿ.೯ ರಂದು ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತಂದಿದೆ. ಕಾರ್ಮಿಕ ಇಲಾಖೆಯ ನಿಯಮಗಳ ಪ್ರಕಾರ, ಮುಷ್ಕರ ಮಾಡುವ ಮುನ್ನಾ ೨೧ ದಿನ ಮುಂಚಿತವಾಗಿ ನೋಟಿಸ್ ನೀಡಬೇಕು. ನೋಟಿಸ್ ನೀಡಿ ಗಮನಕ್ಕೆ ತಂದರೂ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾರಿಗೆ ನೌಕರರ ೨,೯೦೦ ಕೋಟಿ ರೂ.ಗಳನ್ನು ಪಿಎಫ್ ರೂಪದಲ್ಲಿ ರಾಜ್ಯ ಸರ್ಕಾರವು ಸಂಬಳದಲ್ಲಿ ಕಡಿತ ಮಾಡಿದೆ. ನಾವು ಪಾವತಿಸಿದ ಹಣವನ್ನು ಸಾಲದ ರೂಪದಲ್ಲಿ ಕೊಡುವಂತೆ ಕೇಳಿದರೂ ನೀಡುತ್ತಿಲ್ಲ ಎಂದು ದೂರಿದರು.

ಕ್ರಿಯಾ ಸಮಿತಿ ಪದಾಧಿಕಾರಿ ಅಶೋಕ್ ಕುಮಾರ್, ನಾಗರಾಜ್, ವೆಂಕಟೇಶ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಚಿತ್ರ ೨೮ ಕೆ.ಎಲ್.ಆರ್. ೦೬ : ಸಾರಿಗೆ ಇಲಾಖೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಡಿ.೩೧ ರಂದು ಸಾರಿಗೆ ಸಂಚಾರ ಸ್ಥಗಿತಗೊಳಿಸುವುದರ ಬಗ್ಗೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮುಖಂಡರು ಪತ್ರಿಕಾಗೋಷ್ಠಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net