ಕೆಪಿಸಿಸಿ ಮುಂಭಾಗ ಅನಧಿಕೃತ ಜಾಹೀರಾತು ಫಲಕ ಅಳವಡಿಕೆ: 50 ಸಾವಿರ ದಂಡ

banner
Published on

ಬೆಂಗಳೂರು: ರಾಜಧಾನಿಯಲ್ಲಿ ಅಂದಗೆಡಿಸಿರುವ ಬ್ಯಾನರ್, ಹೋರ್ಡಿಗ್ಸ್, ಬಂಟಿಂಗ್ಸ್, ಎಲ್‌ಇಡಿ ಸೇರಿ ಇತರ ಬಗೆಯ ಅನಧಿಕೃತ ಜಾಹೀರಾತು ಫಲಕ ತೆರವುಗೊಳಿಸಲು ಬಿಬಿಎಂಪಿ ಮುಂದಾಗಿದೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ನಗರದ ಕ್ವೀನ್ಸ್ ರಸ್ತೆಯಲ್ಲಿ ಅಳವಡಿಸಿದ್ದ ಅನಧಿಕೃತ ಬ್ಯಾನರ್ ತೆರವುಗೊಳಿಸಿದ ಪಾಲಿಕೆ, 50 ಸಾವಿರ ರೂ.ದಂಡ ವಿಧಿಸಿದೆ. ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ಪದಾಧಿಕಾರಿಗಳು, ಮಾಜಿ ಪ್ರಧಾನ ಮಂತ್ರಿ ದಿ.ರಾಜೀವ್ ಗಾಂಧಿ ಹಾಗೂ ಮಾಜಿ ಸಿಎಂ ಡಿ. ದೇವರಾಜ ಅರಸು ಅವರ ಜನ್ಮ ದಿನ ಪ್ರಯುಕ್ತ ವಸಂತನಗರ ವಾರ್ಡ್‌ನ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ ಅನಧಿಕೃತವಾಗಿ ಜಾಹೀರಾತು ಫಲಕ ಅಳವಡಿಸಲಾಗಿತ್ತು. ಈ ಸಂಬಂಧ ಪಾಲಿಕೆಯಿಂದ ಅನುಮತಿ ಪಡೆಯದೆ ಅನಧಿಕೃತವಾಗಿ ಜಾಹೀರಾತು ಅಳವಡಿಸಿರುವ ಕಾರಣ ವಿಧಿಸಲಾಗಿರುವ 50 ಸಾವಿರ ರೂ.ದಂಡದ ಮೊತ್ತವನ್ನು ಬಿಬಿಎಂಪಿ ಮುಖ್ಯ ಆಯುಕ್ತರ ಖಾತೆಗೆ ಜಮೆ ಮಾಡುವಂತೆ ಸೂಚಿಸಲಾಗಿದೆ.

ಸಾರ್ವಜನಿಕರ ಸ್ಥಳ ಸೇರಿ ಎಲ್ಲೆಂದರಲ್ಲಿ ಅಳವಡಿಸಿರುವ ಜಾಹೀರಾತು ಫಲಕ ತೆರವುಗೊಳಿಸಲು ಇತ್ತೀಚಿಗಷ್ಟೇ ಹೈಕೋರ್ಟ್, ಮೂರು ವಾರಗಳ ಕಾಲ ಕಾಲಾವಕಾಶ ಕೊಟ್ಟು ಒಂದೇ ಒಂದು ಫ್ಲೆಕ್ಸ್​​​ ಕಂಡುಬಂದರೆ ಪಾಲಿಕೆ ಮತ್ತು ಸರ್ಕಾರ ತಲಾ 50 ಸಾವಿರ ರೂ.ಠೇವಣಿ ಇಡಬೇಕೆಂದು ನಿರ್ದೇಶಿಸಿತ್ತು. ನ್ಯಾಯಾಲಯದ ಆದೇಶದಂತೆ ಕೂಡಲೇ ತುರ್ತು ಕ್ರಮಕೈಗೊಂಡು ತುಷಾರ್ ಗಿರಿನಾಥ್,ಎಲ್ಲ ರೀತಿಯ ಜಾಹೀರಾತು ಫಲಕವನ್ನು ತೆರವುಗೊಳಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. ಆಯಾ ವಲಯದ ಜಂಟಿ ಆಯುಕ್ತರು ಮತ್ತು ಮುಖ್ಯ ಅಭಿಯಂತರು ಅನಧಿಕೃತ ಜಾಹೀರಾತು ಫಲಕ ತೆರವುಗೊಳಿಸಲು ವಿಫಲವಾಗಿದ್ದಲ್ಲಿ ಇವರನ್ನೇ ನೇರ ಹೊಣೆ ಮಾಡಿ ತಲಾ 50 ಸಾವಿರ ರೂ.ಠೇವಣಿ ಹಣ ವಸೂಲಿ ಮಾಡಲಾಗುವುದು ಎಂದು ಮುಖ್ಯ ಆಯುಕ್ತರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net