5 ವರ್ಷ ಗ್ಯಾರಂಟಿಗಳು ನಿಲ್ಲಲ್ಲ, ಮುಂದಿನ ವರ್ಷಕ್ಕೆ ಬೇಕಾಗುವ ಹಣವನ್ನು ಈಗಾಗಲೇ ತೆಗೆದಿಟ್ಟಿದ್ದೇನೆ: ಸಿಎಂ

WhatsApp Image 2024-04-28 at 8.13.37 PM
Published on

ಬೆಳಗಾವಿ: ಇಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಮೃಣಾಳ್ ಹೆಬ್ಬಾಳ್ಕರ್ ಅವರ ಪರವಾಗಿ ಆಯೋಜಿಸಿದ್ದ ಪ್ರಜಾಧ್ವನಿ- ಜನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಐದು ವರ್ಷ ಗ್ಯಾರಂಟಿಗಳು ನಿಲುವುದಿಲ್ಲ. ಮುಂದಿನ ವರ್ಷಕ್ಕೆ ಬೇಕಾಗುವ ಹಣವನ್ನು ನಾನು ಈಗಾಗಲೇ ತೆಗೆದಿಟ್ಟಿದ್ದೇನೆ ಎಂದು ಭರವಸೆಯ ಮಾತುಗಳನ್ನಾಡಿದರು.

"ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ನಾನೇ ಅಭ್ಯರ್ಥಿ ಎಂದು ಭಾವಿಸಿ, ಭರ್ಜರಿ ಬಹುಮತದಿಂದ ಕಾಂಗ್ರೆಸ್ ಗೆಲ್ಲಿಸಿ ಕೊಡಿ. ಹುಬ್ಬಳ್ಳಿಯಲ್ಲಿ ಸೋತಿದ್ದ ಜಗದೀಶ್ ಶೆಟ್ಟರ್ ಅವರನ್ನು ಬೆಳಗಾವಿಯಲ್ಲೂ ಸೋಲಿಸಿ ವಾಪಾಸ್ ಕಳುಹಿಸಿ. ಲಕ್ಷ್ಮಿ ಹೆಬ್ಬಾಳ್ಕರ್​ ಅವರು ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅವರ ಪುತ್ರನನ್ನು ಗೆಲ್ಲಿಸಿದರೆ ಜಿಲ್ಲೆಯ ಅಭಿವೃದ್ಧಿ ವೇಗ ಹೆಚ್ಚುತ್ತದೆ" ಎಂದರು.

"ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಗೆ ಬಂದು ಹಸಿ ಹಸಿ ಸುಳ್ಳು ಹೇಳಿ ಹೋಗಿದ್ದಾರೆ. ಪ್ರತೀ ಬಾರಿ ರಾಜ್ಯಕ್ಕೆ ಬರೋದು, ಸುಳ್ಳು ಹೇಳಿ ಹೋಗೋದು, ಇದೇ ಆಯ್ತು. ನಾವು ಶಿವಾಜಿ ಮತ್ತು ಕಿತ್ತೂರು ರಾಣಿ ಚನ್ನಮ್ಮ ಅವರಿಗೆ ಅವಮಾನಿಸಿದ್ದೀವಿ ಎಂದು ಸುಳ್ಳು ಹೇಳಿ ಹೋಗಿದ್ದಾರೆ. ರಾಣಿ ಚನ್ನಮ್ಮ ಜಯಂತಿ ಆರಂಭಿಸಿದ್ದು ನಮ್ಮ ಸರ್ಕಾರ. ಶಿವಾಜಿ ಮಹಾರಾಜರನ್ನು ಅತ್ಯಂತ ಗೌರವದಿಂದ ಕಾಣುವವರು ನಾವು. ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರ ಮಾಡಿದವರು ನಾವು. ಹೀಗಾಗಿ ಈ ಹಸಿ ಸುಳ್ಳುಗಾರ ಮೋದಿ ಮಾತನ್ನು ನಂಬಬೇಡಿ. ನಂಬಿ ಮೋಸ ಹೋಗದಿರಿ" ಎಂದು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

"ಮೊದಮೊದಲು ಬಿಜೆಪಿಯವರು ನಮ್ಮ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳನ್ನು ಅವಮಾನಿಸಿದರು. ಈಗ ಚುನಾವಣೆ ಬಳಿಕ ಗ್ಯಾರಂಟಿಗಳು ನಿಂತು ಹೋಗುತ್ತವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ಐದು ವರ್ಷ ಗ್ಯಾರಂಟಿಗಳು ನಿಲ್ಲುವುದಿಲ್ಲ. ಮುಂದಿನ ವರ್ಷಕ್ಕೆ ಬೇಕಾಗುವ ಹಣವನ್ನು ನಾನು ಈಗಾಗಲೇ ತೆಗೆದಿಟ್ಟಿದ್ದೇನೆ" ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net