ಅಳಿಯನಿಂದಲೇ ಮಾವನ ಅಪಹರಣ!; ರಿಯಲ್​ ಎಸ್ಟೇಟ್​ ಉದ್ಯಮಿ ಕಿಡ್ನ್ಯಾಪ್​ ಸಂಬಂಧ ಐವರ ಬಂಧನ

Untitled
Published on

ಬೆಂಗಳೂರು: ರಿಯಲ್​ ಎಸ್ಟೇಟ್​ ಉದ್ಯಮಿ ಆಗಿರುವ ಮಾವನನ್ನು ಅಳಿಯನೇ ಅಪಹರಣ ಮಾಡಿಸಿದ್ದು, ಇದೀಗ ಅಳಿಯನ ಸಹಿತ ಐವರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಅಳಿಯ ಪವನ ವಾಜಪೇಯಿ ಅಪಹರಣದ ಪ್ರಮುಖ ಸೂತ್ರಧಾರಿಯಾಗಿದ್ದು, ಆತನ ಸೂಚನೆ ಮೇರೆಗೆ ಅಪಹರಣ ಮಾಡಿದ್ದ ನಾಲ್ವರನ್ನೂ ಪೊಲೀಸರು ಬಂಧಿಸಿದ್ದಾರೆ.

ಪವನ ವಾಜಪೇಯಿ, ಆಸೀಫ್, ಸಮೀರ, ಮಂಜುನಾಥ, ಖಲೀಲ ಅಪಹರಣ ಮಾಡಿದ್ದ ಆರೋಪಿಗಳು. ಶ್ರೀನಿವಾಸ ನಾಯ್ಡು ಅಪಹರಣಕ್ಕೆ ಒಳಗಾಗಿದ್ದ ಉದ್ಯಮಿ. ಈ ಅಪಹರಣ ಪ್ರಕರಣ ನಿನ್ನೆ ಶ್ರೀನಿವಾಸ ನಾಯ್ಡು ಅವರು ಅಳಿಯನೊಂದಿಗೆ ಜಮೀನು ನೋಡಲು ಹೋಗಿದ್ದಾಗ ಧಾರವಾಡದಲ್ಲಿ ನಡೆದಿತ್ತು.

ಅಪಹರಣ ನಡೆದ ಬಳಿಕ ಅಳಿಯನೇ ಪೊಲೀಸರಿಗೆ ಮಾಹಿತಿ ನೀಡಿ ಮಾವನ ಕಿಡ್ನ್ಯಾಪ್ ಆಗಿದೆ ಎಂದು ದೂರು ನೀಡಿದ್ದ. ಆ ಮೇರೆಗೆ ಕಾರ್ಯಾಚರಣೆಗಿಳಿದ ಪೊಲೀಸರು ಅಪಹರಣಕಾರರು ಇರುವ ಸ್ಥಳ ಪತ್ತೆ ಮಾಡಿ ದಾಳಿ ಮಾಡಿದ್ದರು. ಈ ಸಂದರ್ಭದಲ್ಲಿ ಅಪಹರಣಕಾರರು ಪರಾರಿಯಾಗಿದ್ದು, ಪೊಲೀಸರು ಉದ್ಯಮಿಯನ್ನು ರಕ್ಷಿಸಿ ಠಾಣೆಗೆ ಕರೆ ತಂದಿದ್ದರು.

ಆರಂಭದಿಂದಲೇ ಅಳಿಯನ ಬಗ್ಗೆ ಅನುಮಾನ ಹೊಂದಿದ್ದ ಪೊಲೀಸರು ತನಿಖೆ ನಡೆಸಿದಾಗ ಆತನೇ ಅಪಹರಣದ ಕಿಂಗ್​ಪಿನ್​ ಆಗಿರುವುದು ತಿಳಿದು ಬಂದಿದೆ. ಇಂದು ವಿದ್ಯಾಗಿರಿ ಠಾಣಾ ಪೊಲೀಸರು ಅಳಿಯ ಸೇರಿ ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಯಾವ ಕಾರಣಕ್ಕೆ ಅಪಹರಣ ಮಾಡಲಾಗಿದೆ ಎಂಬಿತ್ಯಾದಿ ಮಾಹಿತಿ ಕುರಿತು ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net