ಬಂಟ್ವಾಳ ಸಮಾಜ ಸೇವಾ ಸಹಕಾರಿಗೆ 5.71 ಕೋಟಿ ರೂ. ಲಾಭ : ಅಧ್ಯಕ್ಷ ಸುರೇಶ್ ಕುಲಾಲ್ ಮಾಹಿತಿ

Published on

ಬಂಟ್ವಾಳ: ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘ 2023-24ನೇ ಸಾಲಿನಲ್ಲಿ 982.54 ಕೋಟಿ ರೂ. ವ್ಯವಹಾರ ನಡೆಸಿ 5.71 ಕೋಟಿ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಸುರೇಶ್ ಕುಲಾಲ್ ತಿಳಿಸಿದರು.

ಸಂಘದ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಡಾ.ಅಮ್ಮೆಂಬಳ ಬಾಳಪ್ಪ ಹಾಗೂ ಬಿ.ಹೂವಯ್ಯ ಮೂಲ್ಯ ಅವರಿಂದ ಆರಂಭಗೊಂಡ ಸಮಾಜ ಸೇವಾ ಸಹಕಾರಿ ಸಂಘದಲ್ಲಿ ಪ್ರಸ್ತುತ 8660 ಸದಸ್ಯರಿದ್ದು, 7.87 ಕೋಟಿ ರೂ. ಪಾಲು ಬಂಡವಾಳ, 214.26 ಕೋಟಿ ರೂ. ಠೇವಣಾತಿ, 15.68 ಕೋಟಿ ರೂ. ನಿಧಿಗಳು, 59.82 ಕೋಟಿ ರೂ. ವಿನಿಯೋಗಗಳು, 192.78 ಕೋಟಿ ರೂ. ಸಾಲ ಹೊಂದಿದ್ದು, ಶೇ.95.02 ವಸೂಲಾತಿಯಾಗಿದೆ. ಸಂಘದ ದುಡಿವ ಬಂಡವಾಳ 239.90 ಕೋಟಿ ರೂ. ಆಗಿದ್ದು, ಆಡಿಟ್ ವರ್ಗಿಕರಣದಲ್ಲಿ ‘ಎ’ ತರಗತಿ ಪಡೆದುಕೊಂಡಿದೆ ಎಂದರು.

ಬಂಟ್ವಾಳ, ಮಂಗಳೂರು, ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕುಗಳಿಗೆ ಸೀಮಿತವಾಗಿದ್ದ ಸಂಘದ ಕಾರ್ಯವ್ಯಾಪ್ತಿಯನ್ನು ದ.ಕ. ಜಿಲ್ಲೆ ಹಾಗೂ ಉಡುಪಿ ಜಿಲ್ಲೆಗೆ ವಿಸ್ತರಿಸಿದೆ. ಮುಂದಿನ ದಿನಗಳಲ್ಲಿ ಇನ್ನೂ 4 ಹೊಸ ಶಾಖೆಗಳನ್ನು ಆರಂಭಿಸಲು ಹಾಗೂ ಹೆಚ್ಚಿನ ಜನರಿಗೆ ಉದ್ಯೋಗ ನೀಡುವ ಚಿಂತನೆಯನ್ನು ಆಡಳಿತ ಮಂಡಳಿ ಮಾಡಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಪದ್ಮನಾಭ ವಿಟ್ಲ, ನಿರ್ದೇಶಕರಾದ ಜನಾರ್ದನ ಬೊಂಡಾಲ, ಸುರೇಶ ಎನ್, ರಮೇಶ್ ಸಾಲ್ಯಾನ್, ನಾಗೇಶ್ ಬಾಳೆಹಿತ್ಲು, ಪ್ರಧಾನ ವ್ಯವಸ್ಥಾಪಕ ಭೋಜ ಮೂಲ್ಯ, ಸಹಾಯಕ ಪ್ರಧಾನ ವ್ಯವಸ್ಥಾಪಕ ಮೋಹನ್ ಎಂ.ಕೆ. ಉಪಸ್ಥಿತರಿದ್ದರು.

ಸೆ.1ರಂದು ವಾರ್ಷಿಕ ಮಹಾಸಭೆ

ಗ್ರಾಹಕರ ಹಿತದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಆನ್‌ಲೈನ್ ಮುಖಾಂತರ ಸೇವೆಯನ್ನು ನೀಡುವ ಬಗ್ಗೆ ಯೋಜನೆ ರೂಪಿಸಿದ್ದು, ಬಂಟ್ವಾಳ ಬೈಪಾಸ್ ಶಾಖೆಯಲ್ಲಿ ಇ-ಸ್ಟ್ಯಾಂಪ್ ಸೌಲಭ್ಯ ಅಳವಡಿಸಲಾಗಿದೆ. ಸಂಘದಲ್ಲಿ 241 ಅಮೂಲ್ಯ ಸ್ವಸಹಾಯ ಗುಂಪುಗಳಿದ್ದು, 2207 ಸದಸ್ಯರು ಸಕ್ರಿಯವಾಗಿ ವ್ಯವಹರಿಸಿ 83.63 ಲಕ್ಷ ರೂ. ಉಳಿತಾಯ ಮಾಡಿದ್ದಾರೆ. ಸಂಘದ ಸರ್ವತೋಮುಖ ಅಭಿವೃದ್ಧಿಯನ್ನು ಪರಿಗಣಿಸಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಾಧನಾ ಪ್ರಶಸ್ತಿಯನ್ನು ನೀಡಿದೆ. ಸಂಘದ 2023-24ನೇ ಸಾಲಿನ ಮಹಾಸಭೆ ಸೆ.1ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾಮಂದಿರದಲ್ಲಿ ನಡೆಯಲಿದೆ ಎಂದು ಸುರೇಶ್ ಕುಲಾಲ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net