ಯಲ್ಲಮ್ಮನ ಗುಡ್ಡದಲ್ಲಿ ದಕ್ಷಿಣ ಭಾರತದಲ್ಲೇ 2ನೇ ದೊಡ್ಡ ಕ್ಯೂ ಕಾಂಪ್ಲೆಕ್ಸ್! ತಿರುಮಲ ಮಾದರಿಯಲ್ಲಿಯೇ ಅಭಿವೃದ್ಧಿ ಸಂಕಲ್ಪ | Yellamma Temple

ವಿಜಯವಾಣಿ - 2025-05-22T173613.176
Published on
  • ಭಕ್ತರ ಆಗಮನ ಶೇ.21ರಷ್ಟು ಹೆಚ್ಚಳ
  • 300 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯ
  • ಡಿಪಿಆರ್ ಅಂತಿಮ, ಟೆಂಡರ್ ಕರೆಯಲು ಸೂಚನೆ

| ಮಂಜುನಾಥ ಕೋಳಿಗುಡ್ಡ, ಬೆಳಗಾವಿ

ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ, ಕೋಟ್ಯಂತರ ಭಕ್ತರ ಹೊಂದಿರುವ ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ (Yellamma Temple) ಭಕ್ತರ ಅನುಕೂಲಕ್ಕಾಗಿ ತಿರುಮಲ ದೇವಾಲಯದ ಮಾದರಿಯಲ್ಲೇ 40 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ‘ಕ್ಯೂ ಕಾಂಪ್ಲೆಕ್ಸ್’ ನಿರ್ಮಾಣಕ್ಕೆ ಸರ್ಕಾರ ಸಜ್ಜಾಗಿದ್ದು, ಇದು ದಕ್ಷಿಣ ಭಾರತದ ಆಂಧ್ರಪ್ರದೇಶದ ತಿರುಮಲ ಹೊರತು ಪಡಿಸಿದರೆ ಅತಿದೊಡ್ಡ ಕ್ಯೂ ಕಾಂಪ್ಲೆಕ್ಸ್ ಇದಾಗಲಿದೆ.

ಕಳೆದ ನಾಲ್ಕೈದು ವರ್ಷದ ಅವಧಿಯಲ್ಲಿ ಕರ್ನಾಟಕ ಸೇರಿ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಗೋವಾ ಇತರ ರಾಜ್ಯಗಳಿಂದ 8.20 ಕೋಟಿ ಭಕ್ತರು ಸವದತ್ತಿ ಯಲ್ಲಮ್ಮಗುಡ್ಡಕ್ಕೆ ಬಂದು ದೇವಿ ದರ್ಶನ ಪಡೆದಿದ್ದಾರೆ. ವರ್ಷದಿಂದ ವರ್ಷಕ್ಕೆ ಭಕ್ತರ ಆಗಮನ ಶೇ.21ರಷ್ಟು ಹೆಚ್ಚಳವಾಗುತ್ತಿದೆ. ಆದರೆ, ದೇವಸ್ಥಾನದಲ್ಲಿ ಸೂಕ್ತವಾದ ಮೂಲ ಸೌಕರ್ಯ ಇಲ್ಲದಿರುವ ಕಾರಣ ಭಕ್ತರು ನಾನಾ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಇದಕ್ಕೆಲ್ಲ ಶಾಶ್ವತ ಪರಿಹಾರ ಕಲ್ಪಿಸಿಕೊಡಬೇಕು ಎಂಬ ಏಕೈಕ ಉದ್ದೇಶದಿಂದ ಕೇಂದ್ರ, ರಾಜ್ಯ ಸರ್ಕಾರಗಳ ಧಾರ್ಮಿಕ ದತ್ತಿ ಇಲಾಖೆ, ಪ್ರವಾಸೋದ್ಯಮ ಇಲಾಖೆಗಳು ಜಂಟಿಯಾಗಿ ದೇವಸ್ಥಾನ ಸಮಗ್ರ ಅಭಿವೃದ್ಧಿ ಸಂಕಲ್ಪ ತೊಟ್ಟಿವೆ.

ಆರಂಭದಲ್ಲಿಯೇ 300 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳು ಆರಂಭಗೊಳ್ಳುತ್ತಿವೆ. ಇದೀಗ 40 ಕೋಟಿ ರೂ. ವೆಚ್ಚದಲ್ಲಿ ಕ್ಯೂ ಕಾಂಪ್ಲೆಕ್ಸ್ ನಿರ್ಮಾಣ ಡಿಪಿಆರ್ ಅಂತಿಮಗೊಂಡಿದ್ದು, ಮೇ 30ರ ಒಳಗಾಗಿ ಟೆಂಡರ್ ಕರೆಯಲು ಸರ್ಕಾರ ಸೂಚನೆ ನೀಡಿದೆ. ಈಗಾಗಲೇ ತಿರುಮಲ ಮಾದರಿಯಲ್ಲಿ ದೇವಿ ದರ್ಶನ ವ್ಯವಸ್ಥೆ, ಧರ್ಮಸ್ಥಳ ಮಾದರಿಯಲ್ಲಿ ಅನ್ನದಾಸೋಹ ಹಾಗೂ ಜಾನುವಾರುಗಳಿಗೆ ಮೇವು ದಾಸೋಹ ಕಾರ್ಯಕ್ರಮ ರೂಪಿಸಲಾಗಿದೆ. ವರ್ಷದ ಅಂತ್ಯದ ಒಳಗಾಗಿ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲು ಗುರಿ ಹಾಕಿಕೊಂಡಿದ್ದೇವೆ ಎಂದು ಸವದತ್ತಿ ಯಲ್ಲಮ್ಮದೇವಿ ಅಭಿವೃದ್ಧಿ ಮಂಡಳಿ, ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಕ್ಯೂ ಕಾಂಪ್ಲೆಕ್ಸ್’ ವಿಶೇಷತೆಗಳೇನು?

ತಿರುಪತಿ ತಿರುಮಲದಲ್ಲಿರುವಂತೆ ಕೂರಲು, ವಿಶ್ರಾಂತಿ ಪಡೆಯಲು ಅಚ್ಚುಕಟ್ಟಾದ ವ್ಯವಸ್ಥೆ.

ಸಂಕೀರ್ಣದಲ್ಲಿ ಆಧುನಿಕ ತಂತ್ರಜ್ಞಾನ ಬಳಕೆಯೊಂದಿಗೆ ಭಕ್ತರಿಗೆ ಎಲ್ಲ ಸೌಲಭ್ಯ.

ಎರಡು ಅಂತಸ್ತಿನ ಸಂಕೀರ್ಣದಲ್ಲಿ 16ಕ್ಕೂ ವಿಶಾಲ ಭವನ.

ಪ್ರತಿ ಭವನದಲ್ಲಿ ಏಕಕಾಲದಲ್ಲಿ 500ರಿಂದ 600 ಜನ ಭಕ್ತರು ವಿಶ್ರಾಂತಿ ಪಡೆಯಬಹುದಾಗಿದೆ.

ಒಂದೇ ಬಾರಿಗೆ 7ರಿಂದ 8 ಸಾವಿರ ಜನರು ದೇವಿಯ ದರ್ಶನ ವ್ಯವಸ್ಥೆ.

ಪ್ರತಿ ಭವನದಲ್ಲಿ ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ.

ದೇವಿಯ ದರ್ಶನಕ್ಕೆ ಬರುವ ಗರ್ಭಿಣಿಯರಿಗೆ ಮತ್ತು ಮಕ್ಕಳ ಆರೈಕೆ ಕೊಠಡಿ.

2 ಗಂಟೆಯ ಅವಧಿಯಲ್ಲಿಯೇ ದೇವಿಯ ದರ್ಶನಕ್ಕೆ ಅವಕಾಶ

ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಳ

ವರ್ಷ ಭಕ್ತರ ಸಂಖ್ಯೆ

2021- 93,24,520

2022- 1,10,23,403

2023- 1,24,10,345

2024 -1,15,30,132

2025- 85,32,765 ( ಏಪ್ರಿಲ್‌ವರೆಗೂ)

"ಕರ್ನಾಟಕ, ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ ಸೇರಿ ವಿವಿಧ ರಾಜ್ಯಗಳಿಂದ ವಾರ್ಷಿಕ ಕೋಟ್ಯಂತರ ಭಕ್ತರು ಸವದತ್ತಿ ಯಲ್ಲಮ್ಮ ದರ್ಶನಕ್ಕೆ ಬರುತ್ತಾರೆ. ಭಕ್ತರ ಅನುಕೂಲಕ್ಕಾಗಿ ತಿರುಪತಿ ದೇವಾಲಯದ ಮಾದರಿಯಲ್ಲಿ ‘ಕ್ಯೂ ಕಾಂಪ್ಲೆಕ್ಸ್’ ನಿರ್ಮಾಣದ ಡಿಪಿಆರ್ ಅಂತಿಮಗೊಂಡಿದ್ದು, ಒಂದೇ ವಾರದಲ್ಲಿ ಟೆಂಡರ್ ಕರೆಯಲಾಗುವುದು".

- ಮೊಹಮ್ಮದ್​ ರೋಷನ್, ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net