ಜಗತ್ತಿಗೆ ಭಾರತದ ಸಾಮರ್ಥ್ಯದ ಅರಿವು : ಮಂಥನ ಕಾವೂರು ಉಪನ್ಯಾಸದಲ್ಲಿ ಲೇಖಕ ವಿಕಾಸ್ ಪುತ್ತೂರು ಪ್ರತಿಪಾದನೆ

New Project (22)
Published on

ಮಂಗಳೂರು: ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ಉಗ್ರ ಕೃತ್ಯದ ಬಳಿಕ ಭಾರತದ ಸೇನೆ ಕೈಗೊಂಡ ಆಪರೇಶನ್ ಸಿಂಧೂರ ಜಗತ್ತಿಗೆ ಎಚ್ಚರಿಕೆಯ ಸಂದೇಶ ನೀಡಿದೆ. ಆಪರೇಶನ್ ಸಿಂಧೂರದಿಂದ ಭಾರತದ ಸಾಮರ್ಥ್ಯದ ಅರಿವು ಜಗತ್ತಿಗೆ ಆಗಿದೆ ಎಂದು ಬಿಜೆಪಿ ಮುಖಂಡ, ಲೇಖಕ ವಿಕಾಸ್ ಪುತ್ತೂರು ಹೇಳಿದರು.

ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಂಗಣದಲ್ಲಿ ಮಂಗಳವಾರ ರಾತ್ರಿ ಹಮ್ಮಿಕೊಂಡ ಮಂಥನ ಕಾವೂರು ತಂಡದ 17ನೇ ಉಪನ್ಯಾಸದಲ್ಲಿ ವಿಷಯ ಮಂಡಿಸಿದರು.

ಭಾರತದ ವಿರುದ್ಧ ದ್ವೇಷ ಸಾಧಿಸುವುದೆ ಪಾಕಿಸ್ತಾನದ ಧ್ಯೇಯ. ಪಾಕಿಸ್ತಾನ ಹುಟ್ಟಿರುವುದೆ ಇಸ್ಲಾಮ್‌ನ ಆಧಾರದಲ್ಲಿ. ಪಾಕಿಸ್ತಾನ ಭಾರತದ ವಿರುದ್ಧ ನೇರವಾಗಿ ಯುದ್ಧ ಮಾಡಲು ಸಾಧ್ಯವಾಗದೆ ಹಿಂಬಾಗಿಲಿನ ಮೂಲಕ ಅಸ್ಥಿರಗೊಳಿಸುವ ಯತ್ನ ಮಾಡುತ್ತಲೇ ಇದೆ. ಜಗತ್ತಿನಲ್ಲಿ ಒಂದು ದೇಶದ ವ್ಯಾಪಾರ-ವಹಿವಾಟುಗಳನ್ನು ಆ ದೇಶದ ಸೈನ್ಯವೇ ನಿಯಂತ್ರಿಸುವ ಉದಾಹರಣೆ ಇದ್ದರೆ ಅದು ಪಾಕಿಸ್ತಾನದಲ್ಲಿ. ಆ ದೇಶದ ಸ್ಟಾಕ್ ಮಾರ್ಕೆಟ್‌ನ ಶೇ.70ರಷ್ಟನ್ನು ಪಾಕಿಸ್ತಾನದ ಸೈನ್ಯವೇ ನಿಯಂತ್ರಿಸುತ್ತಿದೆ ಎಂದು ಹೇಳಿದರು.

ಆಪರೇಶನ್ ಸಿಂಧೂರ ಯಾವುದೇ ಯುದ್ಧ ಘೋಷಣೆಯಾಗಿರಲಿಲ್ಲ. ಉಗ್ರರ ಅಡಗುದಾಣಗಳ ನಿರ್ನಾಮವೇ ಅದರ ಗುರಿಯಾಗಿತ್ತು. ಪಾಕಿಸ್ತಾನದೊಳಗಿನ ಉಗ್ರರ 11 ಅಡಗುದಾಣಗಳನ್ನು ಧ್ವಂಸ ಮಾಡಿದ ಬಳಿಕ ಕಾರ್ಯಾಚರಣೆ ನಿಲ್ಲಿಸಲಾಗಿತ್ತು. ಆದರೆ ಯಾವಾಗ ಪಾಕಿಸ್ತಾನ ನಮ್ಮ ಭೂಮಿಯ ಮೇಲೆ ದಾಳಿ ಮಾಡಿತೋ ಅದಕ್ಕೆ ತಕ್ಕ ಪ್ರತ್ಯುತ್ತರ ಕೊಡುವ ಕೆಲಸ ಮಿಲಿಟರಿಯಿಂದ ಆಯಿತು. ಇದರ ಪರಿಣಾಮವೇ ಯುದ್ಧದ ವಾತಾವರಣ ನಿರ್ಮಾಣವಾಯಿತು ಎಂದು ವಿಕಾಸ್ ಪುತ್ತೂರು ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾವೂರು ನಗರ ಸಂಘಚಾಲಕ್ ಬಿ.ಕೆ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನಿತ್ಯಾನಂದ ಸ್ವಾಗತಿಸಿದರು, ಮೋಹನ್‌ದಾಸ್ ಮರಕಡ ಪುಸ್ತಕ ಪರಿಚಯ ಮಾಡಿದರು. ಭಾಗ್ಯಾ ವೈಯಕ್ತಿಕ ಗೀತೆ ಹಾಡಿದರು. ಸುಮಿತಾ ಹರೀಶ್ ಕಾರ್ಯಕ್ರಮ ನಿರೂಪಿಸಿದರು. ನೀತಾ ಶೆಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net