ಫಲಾನುಭವಿಗಳಿಗೆ ನಿವೇಶನ ಕೊಡಿ : ಹೋರಾಟ ಸಮಿತಿಯಿಂದ ಆಗ್ರಹ

New Project (15)
Published on

ಗುರುಪುರ: ನಿವೇಶನರಹಿತ 97 ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಬಗ್ಗೆ ಸ್ಪಷ್ಟ ಭರವಸೆ ನೀಡದ ಹೊರತು ಧರಣಿ ಹಿಂಪಡೆಯುವುದಿಲ್ಲ ಎಂದು ಕುಪ್ಪೆಪದವು ಗ್ರಾಪಂ ಕಚೇರಿ ಎದುರು ಸೋಮವಾರದಿಂದ ಧರಣಿ ನಡೆಸುತ್ತಿರುವ ಹಕ್ಕುಪತ್ರ ಪಡೆದಿರುವ ನಿವೇಶನರಹಿತರು ಆಗ್ರಹಿಸಿದ್ದಾರೆ.

ನಿವೇಶನರಹಿತರ ಹೋರಾಟ ಸಮಿತಿ ನೇತೃತ್ವದಲ್ಲಿ ಧರಣಿ ನಡೆಯುತ್ತಿದೆ. ಸೋಮವಾರ ಮಂಗಳೂರು ತಾಪಂ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ ಆಗಮಿಸಿ, ನಿವೇಶನರಹಿರ ಮನವೊಲಿಸಲು ವಿಫಲ ಪ್ರಯತ್ನ ನಡೆಸಿದರು.

ಹೊಳ್ಳ ಅವರೊಂದಿಗೆ ತಾಲೂಕು 2ನೇ ಗ್ರೇಡ್ ತಹಸೀಲ್ದಾರ್ ಮುಹಮ್ಮದ್ ರಫೀಕ್ ಚೌಧರಿ, ಗುರುಪುರ ಹೋಬಳಿ ನಾಡ ಕಚೇರಿ ಉಪತಹಸೀಲ್ದಾರ್ ಸ್ಟೀಫನ್, ಕಂದಾಯ ನಿರೀಕ್ಷಕ ಪೂರ್ಣಚಂದ್ರ, ಪಂಚಾಯಿತಿ ಉಪಾಧ್ಯಕ್ಷ ಶರೀಫ್ ಕಜೆ, ಸದಸ್ಯ ರಫೀಕ್ ಇದ್ದರು.

ಸದ್ಯಕ್ಕೆ ಸರ್ವೇ ನಂಬರ್ 12ಪಿ/1ರ ಕಲ್ಲಾಡಿಯಲ್ಲಿ ಹಕ್ಕುಪತ್ರ ಪಡೆದಿರುವ 17 ಮಂದಿ ನಿವೇಶನರಹಿತರಿಗೆ ನಿವೇಶನ ನೀಡಲಾಗುವುದು ಎಂದು ಹೊಳ್ಳ ಭರವಸೆ ನೀಡಿದರು. ಹಕ್ಕುಪತ್ರ ಪಡೆದಿರುವ 80 ಫಲಾನುಭವಿಗಳಿಗೆ ಸರ್ವೇ ನಂಬರ್ 73/1ರ ಅಂಬೆಲೊಟ್ಟು ಎಂಬಲ್ಲಿ ನಿವೇಶನ ಹಂಚಿಕೆ ಬಗ್ಗೆ ಸ್ಪಷ್ಟ ಭರವಸೆ ನೀಡಬೇಕು ಎಂದು ನಿವೇಶನರಹಿತರು ಪಟ್ಟು ಹಿಡಿದರು.

ಕುಪ್ಪೆಪದವು ಪಿಡಿಒ ಸವಿತಾ ಮುದೋಳಿಕರ್ ಮತ್ತು ಗ್ರಾಮಕರಣಿಕ ಮುತ್ತಪ್ಪ ಸ್ಥಳಕ್ಕಾಗಮಿಸಿ ನಿವೇಶನರಹಿರ ಧರಣಿ ವಾಪಸಾತಿಗೆ ವಿಫಲ ಪ್ರಯತ್ನ ನಡೆಸಿದರು.

ಕಾಂಗ್ರೆಸ್ ರಾಜ್ಯ ವಕ್ತಾರ ಎಂ.ಜಿ.ಹೆಗಡೆ ಮಾತನಾಡಿ, ಕರಾವಳಿ ಜಿಲ್ಲೆಯ ಜನರಲ್ಲಿ ಕೋಮು ಭಾವನೆಯ ಅಮಲು ತಲೆಗೇರಿದೆ. ರಾಜಕಾರಣಿಗಳಿಗೆ ಕೋಮುದ್ವೇಷ ಮುಖ್ಯವಾಗಿದ್ದು, ಬಡವರ ಸಮಸ್ಯೆ ಕಾಣದಂತಾಗಿದೆ. ಎರಡೂವರೆ ಸೆಂಟ್ಸ್ ಜಾಗಕ್ಕಾಗಿ ಹಕ್ಕುಪತ್ರ ಪಡೆದು ಮನೆ ಕಟ್ಟಲು ವರ್ಷಗಳ ಕಾಯುವ ಪರಿಸ್ಥಿತಿ ಜಿಲ್ಲೆಯಲ್ಲಿದೆ ಎಂದರು.

ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮಾತನಾಡಿದರು. ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುಕುಮಾರ್, ಮುಖಂಡರಾದ ಯಾದವ ಶೆಟ್ಟಿ, ಮನೋಹರ ಶೆಟ್ಟಿ ನಡಿಕಂಬ್ಳ, ಸದಾಶಿವದಾಸ್, ವಸಂತಿ ಕುಪ್ಪೆಪದವು ಮತ್ತು ಸದಾಶಿವ ಕಟ್ಟೆಮಾರ್‌ಅಬೂಬಕ್ಕರ್ ಕಲ್ಲಾಡಿ ಮತ್ತಿತರರು ಇದ್ದರು.

ತಮ್ಮದೇ ಆದ ಸಣ್ಣ ಮನೆ ಕಟ್ಟಿಕೊಂಡು ಬದುಕು ನಿರ್ವಹಿಸುವ ಬಡವರಿಗೆ ಸರ್ಕಾರದಿಂದ ನಿರಂತರ ಮೋಸ ಆಗುತ್ತಿದೆ. ಹಕ್ಕುಪತ್ರ ಪಡೆದು 7 ವರ್ಷವಾದರೂ ನಿವೇಶನ ನೀಡಿಲ್ಲ. ಕಳೆದ ಜನವರಿಯಲ್ಲಿ ಪ್ರತಿಭಟನೆ ನಡೆಸಿದಾಗ ಒಂದು ತಿಂಗಳಲ್ಲಿ ನಿವೇಶನ ಹಂಚಿಕೆಯಾಗಲಿದೆ ಎಂದು ಕಂದಾಯ ಮತ್ತು ಪಂಚಾಯಿತಿ ಅಧಿಕಾರಿಗಳು ಭರವಸೆ ನೀಡಿದ್ದರು. ಫೆಬ್ರವರಿಯಲ್ಲಿ ನಾಡಕಚೇರಿ ಎದುರು ಪ್ರತಿಭಟನೆ ನಡೆಸಲಾದರೂ ಪ್ರಯೋಜನವಾಗಿಲ್ಲ. ಮುನೀರ್ ಕಾಟಿಪಳ್ಳ ಜಿಲ್ಲಾ ಕಾರ್ಯದರ್ಶಿ, ಸಿಪಿಐಎಂ https://www.vijayavani.net/marathi-social-service-association-general-assembly https://www.vijayavani.net/yoga-festival-3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net