2024ರಲ್ಲಿ ರಾಜ್ಯದಲ್ಲಿ 1,375 ಮಿಮೀ ಮಳೆ: ವಾಡಿಕೆಗಿಂತ ಶೇ.19 ಅಧಿಕ

RainFall
Published on

ಬೆಂಗಳೂರು:ರಾಜ್ಯದಲ್ಲಿ 2024ರ ಜ.1ರಿಂದ ಡಿ.31ರವರೆಗೆ ವಾಡಿಕೆಗಿಂತ ಅಧಿಕ ಮಳೆಯಾಗಿದೆ.ಈ ಅವಧಿಯಲ್ಲಿ ವಾಡಿಕೆಯಂತೆ 1,153 ಮಿಮೀ ಮಳೆಯಾಗಬೇಕಿತ್ತು. ಆದರೆ, 1,375 ಮಿಮೀ ಸುರಿದಿದ್ದು, ಶೇ.19 ವಾಡಿಕೆಗಿಂತ ಅಧಿಕವಾಗಿ ಬಿದ್ದಿದೆ. 8 ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ, 23 ಜಿಲ್ಲೆಗಳಲ್ಲಿ ವಾಡಿಕೆಯಷ್ಟೇ ವರ್ಷಧಾರೆಯಾಗಿದೆ. 2023ರ ಜ.1ರಿಂದ ಡಿ.31ರವರೆಗೆ ಹೋಲಿಸಿದರೆ 2024ರ ಜ.1ರಿಂದ ಡಿ.31ರವರೆಗೆ ವಾಡಿಕೆಗಿಂತ ಅಧಿಕ ಮಳೆಯಾಗಿರುವುದು ಗಮನಾರ್ಹ.

ತುಮಕೂರು, ದಾವಣಗೆರೆ, ಉತ್ತರ ಕನ್ನಡ, ಹಾಸನ, ಚಿಕ್ಕಮಗಳೂರು, ಬೆಳಗಾವಿ, ಮಂಡ್ಯ, ಚಿತ್ರದುರ್ಗ, ದಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗದಲ್ಲಿ ವಾಡಿಕೆಗಿಂತ ಅಧಿಕ ಮಳೆ ಯಾದರೆ, ಗದಗದಲ್ಲಿ ಮಾತ್ರ ವಾಡಿಕೆಗಿಂತ ಶೇ.7ರಷ್ಟು ಕಡಿಮೆ ಸುರಿದಿದೆ.ರಾಜ್ಯದಲ್ಲಿ ವರ್ಷಕ್ಕೆ 1,153 ಮಿಮೀ ಮಳೆಯಾಗುತ್ತಿದೆ. ಕೆಲ ವರ್ಷ ವಾಡಿಕೆಗಿಂತ ಹೆಚ್ಚು ಸುರಿದಿದರೆ ಇನ್ನೂ ಕೆಲ ವರ್ಷ ವಾಡಿಕೆಗಿಂತ ಕಡಿಮೆ ಬೀಳುತ್ತದೆ. 1,153 ಮಿಮೀ ಮಳೆ ಪೈಕಿ ಪೂರ್ವ ಮುಂಗಾರು ಅವಧಿಯಲ್ಲಿ ಶೇ.10, ಮುಂಗಾರು ಅವಧಿಯಲ್ಲಿ ಶೇ.74, ಹಿಂಗಾರು ಅವಧಿಯಲ್ಲಿ ಶೇ.16ರಷ್ಟು ಮಳೆಯಾಗುತ್ತದೆ. 2024ರಲ್ಲಿ ಮುಂಗಾರು ಮತ್ತು ಹಿಂಗಾರು ಆಶಾದಾಯಕವಾಗಿದ್ದ ಪರಿಣಾಮ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, ಕೃಷಿ ಉತ್ಪಾದನೆಯಲ್ಲಿ ಗಣನೀಯವಾಗಿ ಹೆಚ್ಚಾಗಿದೆ.

ಕರಾವಳಿಯಲ್ಲಿ 4,367 ಮಿಮೀ ಮಳೆ:

2024ರ ಜ.1ರಿಂದ ಡಿ.31ರವರೆಗೆ ಕರಾವಳಿ ವ್ಯಾಪ್ತಿಯ ಉಡುಪಿ, ದಣ ಕನ್ನಡ, ಉತ್ತರ ಕನ್ನಡದಲ್ಲಿ ವಾಡಿಕೆಯಂತೆ 3,518 ಮಿಮೀ ಮಳೆಯಾಗುವ ಬದಲು 4,367 ಮಿಮೀ ವರ್ಷಧಾರೆಯಾಗಿದ್ದು, ವಾಡಿಕೆಗಿಂತ ಶೇ.24 ಅಧಿಕವಾಗಿ ಸುರಿದಿದೆ. ಮಲೆನಾಡು ವ್ಯಾಪ್ತಿಯಲ್ಲಿ 1,950 ಮಿಮೀ ವರ್ಷಧಾರೆಯಾಗಬೇಕಿತ್ತು. ಆದರೆ, 2,342 ಮಿಮೀ ಸುರಿದಿದ್ದು, ವಾಡಿಕೆಗಿಂತ ಶೇ.20ರಷ್ಟು ಹೆಚ್ಚು ಸುರಿದಿದೆ. ಉತ್ತರ ಕರ್ನಾಟಕ ವ್ಯಾಪ್ತಿಯಲ್ಲಿ ವಾಡಿಕೆಯಂತೆ 702 ಮಿಮೀ ಮಳೆಯಾಗುವ ಬದಲು 783 ಮಿಮೀ ಬಿದ್ದಿದ್ದು,ವಾಡಿಕೆಗಿಂತ ಶೇ. 12ರಷ್ಟು ಹೆಚ್ಚು ಸುರಿದಿದೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ವಾಡಿಕೆಯಂತೆ 714 ಮಿಮೀ ಬದಲು 875 ಮಿಮೀ ಸುರಿದಿದ್ದು, ವಾಡಿಕೆಗಿಂತ ಶೇ.20 ಹೆಚ್ಚು ವರ್ಷಧಾರೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿರುವ ಅಂಕಿಅಂಶಗಳಿಂದ ಬಹಿರಂಗವಾಗಿದೆ.

ವರ್ಷವಾರು ಸುರಿದ ಮಳೆ ವಿವರ

* 2024ರ ಜ.1ರಿಂದ ಡಿ.31ರವರೆಗೆ 1,375 ಮಿಮೀ

* 2023ರ ಜ.1ರಿಂದ ಡಿ.31ರವರೆಗೆ 872 ಮಿಮೀ

* 2022ರ ಜ.1ರಿಂದ ಡಿ.31ರವರೆಗೆ 1,477 ಮಿಮೀ

* 2021ರ ಜ.1ರಿಂದ ಡಿ.31ರವರೆಗೆ 1,301 ಮಿಮೀ

* 2020ರ ಜ.1ರಿಂದ ಡಿ.31ರವರೆಗೆ 1,301 ಮಿಮೀ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net