ಭಾರಿ ಹೆಬ್ಬಾವನ್ನೇ ಹಿಡಿದ 'ಮಗಧೀರ'; ವಿಡಿಯೋ ವೈರಲ್, ಜನರಿಂದ ಮೆಚ್ಚುಗೆಯ ಮಹಾಪೂರ

Dheeraj Aithal
Published on

ಕುಂದಾಪುರ: ಹಾವನ್ನು ನೋಡಿದರೆ ಸಾಕು, ಮಕ್ಕಳು ಒಮ್ಮೆ ಬೆಚ್ಚಿ ಬೀಳುತ್ತಾರೆ. ಅಂಥದ್ದರಲ್ಲಿ ಇಲ್ಲೊಬ್ಬ ಬಾಲಕ, ಬರೀ ಹನ್ನೆರಡು ವರ್ಷದ ಪೋರ ಹೆಬ್ಬಾವನ್ನೇ ಹಿಡಿದು ಜನರು ಬೆರಗಾಗುವಂತೆ ಮಾಡಿದ್ದಾನೆ. ಈತ ಹೆಬ್ಬಾವಿನ ಬಾಯಿ ಭಾಗಕ್ಕೇ ಕೈ ಹಾಕಿ ಹಿಡಿದಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ವೈರಲ್ ಆಗಲಾರಂಭಿಸಿದೆ.

ಇಂಥದ್ದೊಂದು ಪ್ರಕರಣ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಸಾಲಿಗ್ರಾಮದಲ್ಲಿ ನಡೆದಿದೆ. ಇತ್ತೀಚೆಗೆ ಸಾಲಿಗ್ರಾಮ ಪರಿಸರದಲ್ಲಿ ಈ 12 ವರ್ಷದ ಪೋರ ಹೆಬ್ಬಾವಿಗೆ ಹೆದರದೆ ಅದರ ತಲೆಗೆ ಕೈಹಾಕಿ ಹಿಡಿದ ದೃಶ್ಯ ವಾಟ್ಸ್​ಆ್ಯಪ್​, ಫೇಸ್​ಬುಕ್‌ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡಿದೆ.

ಹೀಗೆ ಹೆಬ್ಬಾವನ್ನು ಹಿಡಿದು ಭೇಷ್ ಎನಿಸಿಕೊಂಡಿರುವ ಈ ಬಾಲಕನ ಹೆಸರು ಧೀರಜ್ ಐತಾಳ್​​. ಈತ ಚಿತ್ರಪಾಡಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾನೆ. ಇವರ ತಂದೆ ಸುಧೀಂದ್ರ ಐತಾಳ್, ಇವರು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಸಮೀಪ ವಾಸವಿದ್ದಾರೆ.

ಸುಧೀಂದ್ರ ಅವರು ಪ್ರಾಣಿಪ್ರೇಮಿಯಾಗಿದ್ದು ಗಾಯಗೊಂಡ ಪ್ರಾಣಿ-ಪಕ್ಷಿಗಳಿಗೆ ಮನೆಯಲ್ಲೇ ಚಿಕಿತ್ಸೆ ನೀಡುತ್ತಿದ್ದಾರೆ. ತಾವು ಪ್ರಾಣಿಗಳೊಂದಿಗೆ ಸ್ನೇಹ ಸಂಬಂಧ ವೃದ್ಧಿಸಿಕೊಳ್ಳುವುದರ ಜೊತೆಗೆ ಪುತ್ರನಿಗೂ ಆ ಕುರಿತ ಅಭಿರುಚಿ ಬೆಳೆಸಿದ್ದಾರೆ. ಈ ಪುಟ್ಟ ಪೋರನ ಧೀರತನಕ್ಕೆ ಮನಸೋತಿರುವ ಜನರು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net