ಟಿವಿ ನೋಡುತ್ತಿದ್ದಾಗ ಹೃದಯಾಘಾತದಿಂದ 11ವರ್ಷದ ಬಾಲಕ ಸಾವು

Heart Attack
Published on

ಹಾಸನ: ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಅತಿ ಕಿರಿಯ ವಯಸ್ಸಿನವರನ್ನು ಹೆಚ್ಚಾಗಿ ಬಾಧಿಸುತ್ತಿದ್ದು, ಇದೀಗ ಮನೆಯಲ್ಲಿ ಟಿವಿ ನೋಡುತ್ತಿದ್ದಾಗ ವಿದ್ಯಾರ್ಥಿಯೋರ್ವ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಚನ್ನಾಪುರದಲ್ಲಿ ನಡೆದಿದೆ. ಮೃತ ಬಾಲಕನನ್ನು ಸಚಿನ್​ (11) ಎಂದು ಗುರುತಿಸಲಾಗಿದ್ದು, ಈತ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಸಚಿನ್​ಗೆ ನಿನ್ನೆ (ಸೆಪ್ಟೆಂಬರ್ 20) ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಿಕೊಂಡಿತ್ತು. ಎದೆ ನೋವಿನಿಂದ ಶಾಲೆಗೆ ಹೋಗದೆ ಮನೆಯಲ್ಲೇ ಇದ್ದ. ಮನೆಯಲ್ಲಿ ಟಿವಿ ನೋಡುತ್ತಿದ್ದ ವೇಳೆ ಹೃದಯಾಘಾತವಾಗಿದೆ. ಇದ್ದಲ್ಲಿಯೇ ಸಚಿನ್ ಕೊನೆಯುಸಿರೆಳೆದಿದ್ದಾನೆ. ಕುಸಿದು ಬಿದ್ದ ಮಗನನ್ನು ಮಾತನಾಡಿಸಲು ಪೋಷಕರು ಮುಂದಾದಾಗ ಮಗ ಮಾತನಾಡಿಲ್ಲ. ಇದರಿಂದ ಗಾಬರಿಗೊಂಡ ಪೋಷಕರು ತಕ್ಷಣವೇ ಆಲೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷೆ ನಡೆಸಿದ ವೈದ್ಯರು ಬಾಲಕ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. 

ಅತಿ ಕಿರಿಯ ವಯಸ್ಸಿನಲ್ಲೇ ಬಾಲಕ ಹೃದಯಾಘಾತಕ್ಕೆ ಬಲಿಯಾಗಿರುವುದು, ಸಾರ್ವಜನಿಕ ವಲಯದಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net