

ಕಾಸರಗೋಡು: ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ವೆಳ್ಳರಿಕುಂಡು ತಾಲೂಕು ಭೀಮನಡಿ ಕುನ್ನಂಗೈ ನಿವಾಸಿ ನೌಫಲ್ ಕೆ.ಕೆ. ಎಂಬಾತನಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಕೆ.ಪ್ರಿಯಾ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ಪಾವತಿಸದಿದ್ದಲ್ಲಿ ಮೂರು ತಿಂಗಳ ಹೆಚ್ಚಿನ ಜೈಲು ಶಿಕ್ಷೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ.
ಪ್ರಕರಣದ ಎರಡು ಮತ್ತು ಮೂರನೇ ಆರೋಪಿಗಳಾದ ಕುರಂಜೇರಿ ಮರಿತ್ ಪರಂಬಿಲ್ ನಿವಾಸಿ ರೋನಿ ವರ್ಗೀಸ್ ಮತ್ತು ಸಮೀರ್ ಅಲಿಯಾಸ್ ಮುಳಗ್‌ಪೊಡಿ ಸಮೀರ್ ಅವರನ್ನು ಖುಲಾಸೆಗೊಳಿಸಲಾಗಿದೆ. 2019 ಫೆ.3ರಂದು ಚಿತ್ತಾರಿಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಪೂೌಟ್ ಎಂಬಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 112 ಕೆ.ಜಿ. ಗಾಂಜಾ ವಶಪಡಿಸಿ ಆರೋಪಿಗಳನ್ನು ಬಂಧಿಸಲಾಗಿತ್ತು.