

ಉಡುಪಿ: ಸುಪ್ರೀಂಕೋರ್ಟ್ ಸೂಚನೆ ಪ್ರಕಾರ ನಗರಸಭಾ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಎಲ್ಲೆಂದರಲ್ಲಿ ಆಹಾರ ಹಾಕುವುದನ್ನು ನಿಷೇಧಿಸಲಾಗುತ್ತಿದ್ದು, ಆಹಾರವನ್ನು ಹಾಕುವ ಸ್ಥಳವನ್ನು ನಿಗದಿಪಡಿಸಿ ಬೋರ್ಡ್ ಹಾಕಲಾಗುವುದು. ಆಹಾರ ನೀಡುವವರಿಗೆ ಗುರುತಿನ ಚೀಟಿ ನೀಡಲಾಗುವುದು. ನಾಯಿಗಳನ್ನು ತಂದು ಬೀದಿಗೆ ಬಿಡುವವರ ವಿರುದ್ಧ ಅಗತ್ಯಕ್ರಮಕೈಗೊಂಡು ದಂಡ ವಿಧಿಸಲಾಗುವುದು ಎಂದು ಪೌರಾಯುಕ್ತ ಮಹೇಶ್ ಹಂಗರಗಿ ತಿಳಿಸಿದರು.
ಸೋಮವಾರ ನಗರಸಭೆಯಲ್ಲಿ ಬೀದಿ ನಾಯಿಗಳ ನಿಯಂತ್ರಣ, ರೇಬಿಸ್ ಲಸಿಕಾ ಕಾರ್ಯಕ್ರಮ, ಸಂತಾನಹರಣ ಶಸ್ತ್ರ ಚಿಕಿತ್ಸೆ ಯೋಜನೆ ಬಗ್ಗೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
ಎಬಿಸಿ ಕಾರ್ಯಕ್ರಮಕ್ಕೆ ಆನೇಕ ಬಾರಿ ಟೆಂಡರ್ ಕರೆದರೂ ಯಾರೂ ಭಾಗವಹಿಸಿಲ್ಲ. ಹೀಗಾಗಿ ಸ್ಥಳಿಯ ಎನ್ ಜಿ ಒ ಜೊತೆ ಸೇರಿಕೊಂಡು ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುವುದು ಎಂದರು.
ಪರಿಸರ ಇಂಜಿನಿಯರ್ ರವಿಪ್ರಕಾಶ್ ಮಾತನಾಡಿ, ಪಾದಚಾರಿ ಮಕ್ಕಳು, ಇಳಿವಯಸ್ಕರಿಗೆ ಬೀದಿನಾಯಿಗಳಿಂದ ಬಹಳಷ್ಟು ತೊಂದರೆಯಾಗುತ್ತಿರುವ ಬಗ್ಗೆ ದೂರುಗಳು ಸಲ್ಲಿಕೆಯಾಗಿವೆ. ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ಸಂರ್ಷ ತಡೆಗಟ್ಟುವುದು ನಗರಸಭೆ ಜವಾಬ್ದಾರಿಯಾಗಿದ್ದು, ರೇಬಿಸ್ ಲಸಿಕಾ ಕಾರ್ಯಕ್ರಮ ಅನುಷ್ಠಾನ ಮತ್ತು ಫೀಡಿಂಗ್ ಪಾಯಿಂಗ್ಗಳನ್ನು ಗುರುತಿಸುವ ಬಗ್ಗೆ ಸುಪ್ರೀಂಕೋರ್ಟ್ಗೆ ಅಫಿದಾವಿತ್ ಸಲ್ಲಿಸಿದ್ದೇವೆ ಎಂದರು.
ನಗರಸಭಾ ಸದಸ್ಯ ಗಿರೀಶ್ ಅಂಚನ್ ಮಾತನಾಡಿ, ನಗರಸಭೆ ಸುತ್ತಮುತ್ತ 2ಕ್ಕಿಂತ ಹೆಚ್ಚು ನಾಯಿಗಳನ್ನು ಸಾಕುತ್ತಿರುವವರು ನೋಂದಣಿ ಮಾಡಿಕೊಳ್ಳುವಂತೆ ನಿಯಮ ರೂಪಿಸಬೇಕು. ಹೆಣ್ಣು ನಾಯಿಗಳನ್ನು ಬೀದಿಗೆ ಬಿಡುವ ಮುನ್ನ ಸಂತಾನಶಸ್ತ್ರ ಚಿಕಿತ್ಸೆ ಕಡ್ಡಾಯ ಮಾಡುವಂತೆ ಸಲಹೆ ನೀಡಿದರು.
ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಯಡ್ಡಪ್ಪ, ಸ್ಥಾಯೀ ಸಮಿತಿ ಅಧ್ಯಕ್ಷರಾದ ವಿಜಯಕೊಡವೂರು, ಜಿ.ಟಿ. ಹೆಗ್ಡೆ, ಮಂಜುನಾಥ್ ಮಣಿಪಾಲ ಮೊದಲಾದವರು ಉಪಸ್ಥಿತರಿದ್ದರು.