10 ಕೋಟಿ ರೂ. ಸಾಲದ ಆಮಿಷವೊಡ್ಡಿ 10 ಲಕ್ಷ ರೂ. ವಂಚನೆ; ಇಬ್ಬರ ವಿರುದ್ಧ ಎಫ್​ಐಆರ್​

FIR
Published on

ಬೆಂಗಳೂರು: ಉದ್ಯಮ ಮತ್ತಷ್ಟು ವಿಸ್ತರಿಸಲು ಕಡಿಮೆ ಬಡ್ಡಿ ದರಕ್ಕೆ 10 ಕೋಟಿ ರೂ. ಸಾಲ ಕೊಡಿಸುವುದಾಗಿ ಪ್ರಿಂಟಿಂಗ್​ ಪ್ರೆಸ್​ ಮಾಲೀಕನಿಗೆ ನಂಬಿಸಿ 10 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾರೆ. ಕುರುಬರಹಳ್ಳಿಯ ಹರ್ಷ ನಾಡಿಗೇರ್​ ಎಂಬಾತ ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಆರೋಪಿಗಳಾದ ಮಹೇಶ್​ ಗೌಡ ಪಾಟೀಲ್​ ಮತ್ತು ಸುರೇಶ್​ ಎಂಬಾತನ ವಿರುದ್ಧ ಎಫ್ಐಆರ್​ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಹಲವು ದಿನಗಳಿಂದ ಪರಿಚಯವಿದ್ದ ಮಹೇಶ್​ ಮತ್ತು ಸುರೇಶ್​ ಶೇ.3 ದರದಲ್ಲಿ ಬಡ್ಡಿ ಕೊಡಿಸುವುದಾಗಿ ನಂಬಿಸಿ 25 ಸಾವಿರ ರೂ. ಮೌಲ್ಯದ ಅಗ್ರಿಮೆಂಟ್​ ಪೇಪರ್​ ಅವಶ್ಯಕತೆ ಇದೆ. ಅದನ್ನು ಸಿದ್ದಪಡಿಸಲು 10 ಲಕ್ಷ ರೂ. ಬೇಕೆಂದು ಹೇಳಿದ್ದಾರೆ. ಅಷ್ಟೊಂದು ಹಣ ಇಲ್ಲವೆಂದು ಹರ್ಷ ಮತ್ತು ಅವರ ತಂದೆ ಹೇಳಿದ್ದಾರೆ. ಆದರೂ ಬಿಡದೆ ಸಬೂಬು ಹೇಳಿ ನಂಬಿಸಿದ ಆರೋಪಿಗಳು ಮೇ 18ರಂದು 10 ಲಕ್ಷ ರೂ. ಪಡೆದು ಆಧಾರ್​, ಪ್ಯಾನ್​ ಕಾರ್ಡ್​, ಬ್ಯಾಂಕ್​ ಸ್ಟೇಟ್​​ಮೆಂಟ್​ ಪಡೆದು ಹೋಗಿದ್ದಾರೆ. ಹಣ ಪಡೆದ ಮೇಲೆ ಆರೋಪಿಗಳು ಮೊಬೈಲ್​ಫೋನ್​ ನಂಬರ್​ ಕಡಿತ ಮಾಡಿಕೊಂಡಿದ್ದಾರೆ. ನೊಂದ ಹರ್ಷ ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಪಿಗೇಹಳ್ಳಿ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net