21ರಂದು ವನ್ಯಜೀವಿ ಉಪಟಳ ತಡೆಗೆ ಸಭೆ : ಜಿಲ್ಲಾಮಟ್ಟದ ನಿಯಂತ್ರಣ ಸಮಿತಿ ಸಭೆಯಲ್ಲಿ ಸಚಿವ ಎ.ಕೆ ಶಶೀಂದ್ರನ್ ಮಾಹಿತಿ

New Project (3)
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ವನ್ಯಜೀವಿ ಉಪಟಳ ತಡೆಗಟ್ಟುವ ನಿಟ್ಟಿನಲ್ಲಿ ಸಮಾಲೋಚಿಸಲು ಅರಣ್ಯ ಗಡಿಗಳನ್ನು ಹಂಚಿಕೊಳ್ಳುವ ಪಂಚಾಯಿತಿ ಕಾರ್ಯದರ್ಶಿಗಳು ಮತ್ತು ಅಧ್ಯಕ್ಷರ ಸಭೆಯನ್ನು ಜುಲೈ 21ರಂದು ಬೆಳಿಗ್ಗೆ 11ಕ್ಕೆ ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಆಯೋಜಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ.ಕೆ.ಶಶೀಂದ್ರನ್ ಹೇಳಿದರು.

ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ಮಾನವ- ವನ್ಯಜೀವಿ ಸಂಘರ್ಷ ತಗ್ಗಿಸುವಿಕೆಗಾಗಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ನಿಯಂತ್ರಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕರ್ನಾಟಕದ ಅರಣ್ಯಗಳೊಂದಿಗೆ ನೇರ ಗಡಿ ಹಂಚಿಕೊಂಡಿರುವ ಪ್ರದೇಶಗಳಲ್ಲಿ ಮಾನವ- ವನ್ಯಜೀವಿ ಸಂಘರ್ಷ ಸಾಮಾನ್ಯವಾಗುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟನಲ್ಲಿ ಸಮಾಲೋಚಿಸಲು ಸಭೆ ಆಯೋಜಿಸಲಾಗುತ್ತಿದೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಮುಖ್ಯಸ್ಥರು ಹಾಗೂ ವಿಭಾಗೀಯ ಅರಣ್ಯ ಅಧಿಕಾರಿ ಸಮಿತಿ ಸಂಚಾಲಕರಾಗಿರುವರು. ಜಿಲ್ಲಾ ವೈದ್ಯಾಧಿಕಾರಿ, ಸ್ಥಳೀಯಾಡಳಿತ ಸಂಸ್ಥೆ ಉಪನಿರ್ದೇಶಕರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಇಲಾಖೆ ಅಧಿಕಾರಿಗಳು, ಜಿಲ್ಲಾ ಕೃಷಿ ಅಧಿಕಾರಿ ಮತ್ತು ಜಿಲ್ಲಾ ಪಶುಸಂಗೋಪನಾ ಅಧಿಕಾರಿಗಳು ಸಮಿತಿ ಸದಸ್ಯರಾಗಿರುತ್ತಾರೆ. ಜನವಾಸ್ತವ್ಯವಿರುವ ಸನಿಹದ ಖಾಸಗಿಯವರ ಜಾಗದಲ್ಲಿ ಕುರುಚಲು ಕಾಡು ತುಂಬಿಕೊಂಡಿದ್ದಲ್ಲಿ ಶುಚೀಕರಿಸಲು ಸಂಬಂಧಪಟ್ಟ ಜಾಗದ ಮಾಲೀಕರಿಗೆ ನೋಟಿಸ್ ನೀಡುವಂತೆ ಪಂಚಾಯಿತಿ ಕಾರ್ಯದರ್ಶಿಗೆ ಸಚಿವರು ಸೂಚಿಸಿದರು.

ಮುಳಿಯಾರ್ ಮತ್ತು ಕಾರಡ್ಕ ಅರಣ್ಯ ಪ್ರದೇಶಗಳಲ್ಲಿ ಅಪಾಯಕಾರಿ ಹಾಗೂ ವ್ಯಾಪಕವಾಗಿ ಬೆಳೆದು ನಿಂತಿರುವ ಅಕೇಶಿಯಾ ಮರಗಳು, ಇತರ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಳೆದಿರುವ ಅಪಾಯಕಾರಿ ಹಾಗೂ ಮಾರಕ ಗಿಡಗಂಟಿಗಳನ್ನು ನಿರ್ಮೂಲನೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚಿಸಿದರು.

ಜಿಪಂ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್, ಜಿಲ್ಲಾ ಪೊಲೀಸ್ ಮುಖ್ಯಸ್ಥ ವಿಜಯ ಭರತ್ ರೆಡ್ಡಿ, ಕಾಸರಗೋಡು ಟಿಡಿಒ ಕೆ.ಕೆ.ಮೋಹನ್ ದಾಸ್, ಎಲ್‌ಎಸ್‌ಜಿಡಿ ಟಿಡಿಒ ಕೆ.ಕೆ ಮೋಹನ್‌ದಾಸ್, ಎಲ್‌ಎಸ್‌ಜಿಡಿ ಉಪನಿರ್ದೇಶಕ ಹರಿದಾಸ್, ಜಿಲ್ಲಾ ಎಸ್‌ಸಿ ಪ್ರಭಾರ ಅಧಿಕಾರಿ ಪಿ.ಮಿನಿ, ಕೃಷಿ ಇಲಾಖೆ ಡಿಡಿ ಮಿನಿ ಮೆಮನ್ ಪಿ., ಪಶುಸಂಗೋಪನಾ ಇಲಾಖೆ ಡಿಡಿ ಪ್ರಭಾರ ಡಾ.ಪಿ.ಶೈಜಿ ಮತ್ತಿತರರಿದ್ದರು.

ಕಾಡುಹಂದಿ ನಿಯಂತ್ರಣ

ಬೆಳೆ ನಾಶಗೊಳಿಸುವ ಹಾಗೂ ಮಾನವ ಜೀವಕ್ಕೆ ಅಪಾಯ ತಂದೊಡ್ಡುದ ಕಾಡುಹಂದಿಗಳನ್ನು ಹತ್ಯೆಗೈಯಲು ಪರವಾನಗಿ ಹೊಂದಿದ ಶಾರ್ಪ್‌ಶೂಟರ್‌ಗಳಿಗೆ ಸರ್ಕಾರ ಗೌರವಧನ ನೀಡಲಿದೆ. ಈಗಾಗಲೇ ಪರಿಣತ ಶಾರ್ಪ್‌ಶೂಟರ್‌ಗಳ ಪಟ್ಟಿಯನ್ನು ಅರಣ್ಯ ಇಲಾಖೆ ಹೊಂದಿದೆ. ಕಾಡುಹಂದಿಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಆಯಾ ಸ್ಥಳೀಯಾಡಳಿತ ಸಂಸ್ಥೆಗಳಿಗೆ ತಲಾ ಒಂದು ಲಕ್ಷ ರೂ. ಒದಗಿಸಲು ಆದೇಶ ಹೊರಡಿಸಲಾಗಿದೆ. ಜಿಲ್ಲೆಯಲ್ಲಿ ಹಾವು ಕಡಿತದಿಂದ ಸಂಭವಿಸುತ್ತಿರುವ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿ ಹಾವಿನ ವಿಷ ಪ್ರತಿರೋಧ ಚಿಕಿತ್ಸೆ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸೂಚನೆಗಳನ್ನು ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net