ಪುತ್ತೂರು: ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ಗರ್ಭಿಣಿಯಾಗಿಸಿ ಮಗುವಿನ ಜನನಕ್ಕೆ ಕಾರಣನಾದ ಪುತ್ತೂರು ಬಪ್ಪಳಿಗೆ ನಿವಾಸಿ ಶ್ರೀಕೃಷ್ಣ ಜೆ.ರಾವ್ ಜೈಲಿನಿಂದ ಹೊರಬಂದ ಕೂಡಲೇ ಸಂತ್ರಸ್ತೆಯನ್ನು ವಿವಾಹವಾಗದೇ ಇದ್ದರೆ ಗುಂಡು ಹೊಡೆದು ಸಾಯಿಸುವುದಾಗಿ ಭೂಗತಪಾತಕಿ ಕಲಿ ಯೋಗೀಶ ಹೆಸರಿನಲ್ಲಿ ಉಡುಪಿಯ ಮಾಧ್ಯಮ ಪ್ರತಿನಿಧಿಯೊಬ್ಬರಿಗೆ ಕರೆ ಮಾಡಿ ಬೆದರಿಕೆ ಹಾಕಲಾಗದೆ.
ಶ್ರೀಕೃಷ್ಣ ರಾವ್ ಹಾಗೂ ಆತನ ತಂದೆ ಜಗನ್ನಿವಾಸ ರಾವ್ ವಿಶ್ವಕರ್ಮ ಸಮುದಾಯದ ಹುಡುಗಿಗೆ ಅನ್ಯಾಯ ಮಾಡಿದ ಬಗ್ಗೆ ದೂರು ಬಂದಿದೆ. ಬಿಜೆಪಿಯವರು ಹಾಗೂ ಹಿಂದು ಸಂಘಟನೆಯವರು ಯಾರೂ ಅವರಿಗೆ ಬೆಂಬಲ ನೀಡುತ್ತಿಲ್ಲ. ಅವರಲ್ಲಿ ದುಡ್ಡಿಲ್ಲ ಎಂದು ಬಿಟ್ಟು ಬಿಡುವುದು ನ್ಯಾಯವಲ್ಲ. ವಿಶ್ವಕರ್ಮ ಸಮುದಾಯದವರೂ ಯುವತಿಗೆ ಬೆಂಬಲ ನೀಡಿ ಪ್ರತಿಭಟನೆ ಮಾಡುವುದು ಬಿಟ್ಟು ಸುಮ್ಮನೆ ಕೂತಿದ್ದಾರೆ. ಬಿಜೆಪಿ ಹಾಗೂ ಸಂಘಟನೆಯವರು ನಡೆದುಕೊಂಡ ರೀತಿ ತಪ್ಪಾಗಿದೆ. ಬಡವರಿಗೆ ಬೆಂಬಲ ನೀಡುವುದು ಬಿಟ್ಟು ದುಡ್ಡಿನವರ ಕಡೆ ಹೋಗುವುದಲ್ಲ. ಎರಡು ಸಮುದಾಯವರೂ ಕೂತು ಇತ್ಯರ್ಥ ಮಾಡಿ ವಿವಾಹ ಮಾಡಬೇಕು. ಹುಡುಗಿಗೆ ಮಗುವಾಗಿದ್ದು, ಅಪ್ಪ ಯಾರು ಎಂದಾಗ ಯಾರನ್ನು ತೋರಿಸುವುದು? ಶಾಸಕ, ಸಂಸದ, ಸಂಘಟನೆಯವರು ಬಡಕುಟುಂಬಕ್ಕೆ ನ್ಯಾಯ ನೀಡಬೇಕು. ಇಲ್ಲದಿದ್ದರೆ ಯುವಕ ಬದುಕುವುದು ಬೇಡ, ಅಪ್ಪ ಜೀವದಲ್ಲಿದ್ದೂ ಇಲ್ಲ ಎಂದು ಹೇಳುವುದಕ್ಕಿಂತ ಅಪ್ಪ ಸತ್ತಿದ್ದಾನೆಂದಾದರೂ ಹೇಳಬಹುದು. ಆಕೆಗೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲವಾದರೆ ನಾವು ಗುಂಡು ಹೊಡೆಯುತ್ತೇವೆ ಎಂದು ಕರೆಯಲ್ಲಿ ಎಚ್ಚರಿಸಲಾಗಿದೆ.
ಪುತ್ತೂರಿಗೆ ಕಲಿ ಯೋಗೀಶ ನಂಟು
೨೦೧೫ರಲ್ಲಿ ಪುತ್ತೂರಿನ ಸಿಪಿಸಿ ಕಾಂಪ್ಲೆಕ್ಸ್ ರಾಜಧಾನಿ ಜುವೆಲ್ಲರ್‍ಸ್ ಶೂಟೌಟ್ ಪ್ರಕರಣ ಹಾಗೂ ೨೦೧೪ರಲ್ಲಿ ಉದ್ಯಮಿಗೆ ಬೆದರಿಕೆ ಒಡ್ಡಿದ ಪ್ರಕರಣದ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಕಲಿ ಯೋಗೀಶ ವಿರುದ್ಧ ಪ್ರಕರಣ ದಾಖಲಾಗಿದೆ.