

ಗುರುಪುರ: ಮಂಗಳೂರು-ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169ರ ಕೆತ್ತಿಕಲ್ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ಗುಡ್ಡ ಕೊರೆದು ಕಾಮಗಾರಿ ನಡೆಸಿರುವುದರಿಂದ ಸುತ್ತಲ ಪ್ರದೇಶದ ಜನರು ಸದಾ ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಇದಕ್ಕೆ ಕಾರಣವಾಗಿರುವ ಜಿಲ್ಲಾಡಳಿತದ ನಿರ್ಲಕ್ಷ್ಯ ಖಂಡಿಸಿ ಜು.13ರಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ವಾಮಂಜೂರು ಪ್ರದೇಶ ಸಮಿತಿ ವಾಮಂಜೂರು ಜಂಕ್ಷನ್ನಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಲು ನಿರ್ಧರಿಸಿದೆ.
ಕೆತ್ತಿಕಲ್ ಪ್ರದೇಶದಲ್ಲಿ ಗುಡ್ಡ ಕುಸಿತದಿಂದ ಸಂತ್ರಸ್ತರಾದ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು. ಅವೈಜ್ಞಾನಿಕವಾಗಿ ಗುಡ್ಡ ಕೊರೆಯಲು ಅವಕಾಶ ನೀಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಅಮೃತನಗರ, ಕೆತ್ತಿಕಲ್, ಅಣೆಬದಿ, ಪರಾರಿ ಭಾಗಗಳು ಈಗ ಅಪಾಯದಲ್ಲಿವೆ. ಈ ಭಾಗದಲ್ಲಿ ವರ್ಷಗಳ ಹಿಂದೆ ಗುಡ್ಡ ಕುಸಿತ, ಭೂಕುಸಿತ ಸಂಭವಿಸಿತ್ತು. ಆ ಸಂದರ್ಭದಲ್ಲಿ ಜಿಲ್ಲಾಡಳಿತವು ಗುಡ್ಡದ ಮಣ್ಣು ಕೊರೆಯುವುದು ಅಥವಾ ಮಾರಾಟ ಮಾಡದಂತೆ ಸೂಕ್ತ ಕ್ರಮ ಜರುಗಿಸುತ್ತಿದ್ದಲ್ಲಿ ಕೆತ್ತಿಕಲ್ ಗುಡ್ಡ ಮತ್ತೊಂದು ಬಾರಿ ಕುಸಿಯುತ್ತಿರಲಿಲ್ಲ ಎಂದು ಫೆಡರೇಶನ್ ಹೇಳಿದೆ.
ಈ ಕುರಿತು ಜನಪ್ರತಿನಿಧಿಗಳು, ಜಿಲ್ಲಾಡಳಿತದ ಗಮನ ಹರಿಸುವ ನಿಟ್ಟಿನಲ್ಲಿ ಫೆಡರೇಶನ್ ಪ್ರತಿಭಟನೆ ಹಮ್ಮಿಕೊಂಡಿದೆ. ವಾಮಂಜೂರು ಜಂಕ್ಷನ್ನಲ್ಲಿ ಬೆಳಗ್ಗೆ 8.30ರಿಂದ ನಡೆಯುವ ಪ್ರತಿಭಟನೆಯಲ್ಲಿ ಸಮಾನ ಮನಸ್ಕರೆಲ್ಲರೂ ಪಾಲ್ಗೊಳ್ಳಲಿದ್ದಾರೆ ಎಂದು ಫೆಡರೇಶನ್ ಪ್ರಕಟಣೆ ತಿಳಿಸಿದೆ.