ಸಂಪ್ಯ ಠಾಣೆಯಲ್ಲಿ ಜನಪ್ರತಿನಿಧಿಗಳಿಗೆ ಅಗೌರವ

Published on

ಪುತ್ತೂರು ಗ್ರಾಮಾಂತರ: ಸಂಪ್ಯ ಠಾಣೆಯ ಪೊಲೀಸರು ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಅಗೌರವ ತೋರಿದ್ದಾರೆ ಎಂಬ ಆರೋಪ ನೆಟ್ಟಣಿಗೆ ಮುಡ್ನೂರು ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ವ್ಯಕ್ತವಾಯಿತು. ಪೊಲೀಸರ ನಡೆಯ ವಿರುದ್ಧ ಸಭೆಯಲ್ಲಿ ಖಂಡನಾ ನಿರ್ಣಯ ಅಂಗೀಕರಿಸಲಾಯಿತು.

ನೆಟ್ಟಣಿಗೆ ಮುಡ್ನೂರು ಗ್ರಾ.ಪಂ. ಸಾಮಾನ್ಯ ಸಭೆ ಅಧ್ಯಕ್ಷೆ ಫೌಝಿಯಾ ಇಬ್ರಾಹಿಂ ಅಧ್ಯಕ್ಷತೆಯಲ್ಲಿ ನಡೆಯಿತು. ಗಾಳಿಮುಖದಲ್ಲಿ ಗ್ರಾ.ಪಂ.ಗೆ ಸೇರಿದ ಅಂಗಡಿ ಕೋಣೆಯೊಂದನ್ನು ಏಲಂ ಮಾಡಲು ಗ್ರಾ.ಪಂ. ನಿರ್ಧರಿಸಿದ್ದು, ಆ ಅಂಗಡಿ ಕೋಣೆಯಲ್ಲಿ ವ್ಯವಹಾರ ಮಾಡುತ್ತಿದ್ದ ವ್ಯಕ್ತಿ ಅದಕ್ಕಿಂತ ಮುಂಚಿತವಾಗಿಯೇ ಕಟ್ಟಡದ ಶೀಟ್ ಹಾಗೂ ಮುಂಭಾಗದಲ್ಲಿ ಅಳವಡಿಸಲಾಗಿದ್ದ ಇಂಟರ್‌ಲಾಕನ್ನು ಗ್ರಾ.ಪಂ. ಗಮನಕ್ಕೆ ತಾರದೆ ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿ ಗ್ರಾ.ಪಂ. ವತಿಯಿಂದ ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಬಳಿಕದ ವಿದ್ಯಮಾನಗಳ ವಿಚಾರದಲ್ಲಿ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದ್ದು, ಈಶ್ವರಮಂಗಲ ಹೊರ ಠಾಣೆಯ ಎಎಸ್‌ಐ ಅವರನ್ನು ಸಭೆಗೆ ಕರೆಸಿಕೊಂಡು ಅವರ ಎದುರು ವಿಷಯ ಪ್ರಸ್ತಾಪಿಸಲಾಗಿತ್ತು. ಈ ದೂರಿಗೆ ಸಂಬಂಧಿಸಿ ಪೊಲೀಸರು ಯಾರ ಮೇಲೆ ದೂರು ನೀಡಲಾಗಿದೆಯೋ ಆ ವ್ಯಕ್ತಿಯನ್ನು ಠಾಣೆಗೆ ಕರೆಸಿ ಮಾತನಾಡಿದ್ದಾರೆ. ಆದರೆ ನಾವು ಠಾಣೆಗೆ ಹೋದಾಗ ಮಹಿಳಾ ಎಸ್‌ಐ ಉಡಾಫೆಯಾಗಿ ಮಾತನಾಡಿ ಅಗೌರವ ತೋರಿದ್ದಾರೆ. ನಮ್ಮೊಂದಿಗೆ ಕೇವಲವಾಗಿ ನಡೆದುಕೊಳ್ಳುವ ಮೂಲಕ ಗ್ರಾಮದ ಜನತೆಗೆ ಅಗೌರವ ತೋರಿದ್ದಾರೆ ಎಂದು ಗ್ರಾ.ಪಂ. ಉಪಾಧ್ಯಕ್ಷ ರಾಮ ಮೇನಾಲ ಮತ್ತು ಅಧ್ಯಕ್ಷೆ ಫೌಝಿಯಾ ಆರೋಪಿಸಿದರು.

ಸದಸ್ಯರಾದ ಚಂದ್ರಹಾಸ, ಇಬ್ರಾಹಿಂ, ಸಂಶುದ್ದೀನ್ ಮಾತನಾಡಿ, ಪೊಲೀಸರು ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷರಿಗೆ ಅಗೌರವ ತೋರಿರುವುದು, ಸದಸ್ಯರ ಬಗ್ಗೆ ಏಕವಚನ ಬಳಕೆ ಮಾಡಿರುವುದು ಖಂಡನೀಯ. ಮಹಿಳಾ ಎಸ್‌ಐ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಂಬಂಧಪಟ್ಟವರಿಗೆ ದೂರು ನೀಡಬೇಕೆಂದು ಒತ್ತಾಯಿಸಿದರು.

ಈ ವಿಷಯದಲ್ಲಿ ಸುದೀರ್ಘ ಚರ್ಚೆಯ ಬಳಿಕ ಸಂಪ್ಯ ಠಾಣೆಯ ಮಹಿಳಾ ಎಸ್‌ಐ ಅವರ ನಡೆಯನ್ನು ಖಂಡಿಸಿ ಖಂಡನಾ ನಿರ್ಣಯ ಕೈಗೊಳ್ಳಲಾಯಿತು.

ಸದಸ್ಯರಾದ ಶ್ರೀರಾಮ ಪಕ್ಕಳ ಕರ್ನೂರುಗುತ್ತು, ಪ್ರದೀಪ್‌ಕುಮಾರ್, ಕುಮಾರನಾಥ್, ವೆಂಕಪ್ಪ ನಾಯ್ಕ, ರಿಯಾಝ್, ವತ್ಸಲ, ಪ್ರಫುಲ್ಲ, ಲಲಿತಾ ಶೆಟ್ಟಿ, ಲಲಿತಾ ಸುಧಾಕರ್, ಇಂದಿರಾ, ಶಶಿಕಲಾ ಉಪಸ್ಥಿತರಿದ್ದು, ತ್ಯಾಜ್ಯ ಸಮಸ್ಯೆ, ಈಶ್ವರಮಂಗಲವನ್ನು ಸ್ವಚ್ಛತಾ ಸಿಟಿ ಮಾಡುವುದು ಮೊದಲಾದ ವಿಚಾರಗಳ ಕುರಿತು ಪ್ರಸ್ತಾಪಿಸಿದರು. ಪಿಡಿಒ ವಿದ್ಯಾಧರ್ ಸಭೆ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net