

ತಮಿಳುನಾಡು: ತಮ್ಮ ಅಭಿನಯದಿಂದಲೇ ತಮಿಳು ಚಿತ್ರರಂಗದಲ್ಲಿ ವಿಶೇಷ ಛಾಪು ಮೂಡಿಸಿರುವ ನಟ ಸೂರ್ಯ, ಹಲವು ಬ್ಲಾಕ್ಬಸ್ಟರ್ ಸಿನಿಮಾಗಳನ್ನು ಕಾಲಿವುಡ್ಗೆ ಕೊಡುಗೆಯಾಗಿ ನೀಡಿದ್ದಾರೆ. ಭಾರತೀಯ ಚಿತ್ರೋದ್ಯಮದಲ್ಲಿ ಬಹಳ ಸರಳ ಹಾಗೂ ಸ್ಟೈಲಿಶ್ ನಟ ಎಂದೇ ಗುರುತಿಸಿಕೊಂಡಿರುವ 'ಸಿಂಗಂ' ನಟ, ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಪರ್ಫೆಕ್ಷನಿಸ್ಟ್ ಎಂದು ಕರೆಯಲ್ಪಡುವ ಸೂರ್ಯ ತಮಗೆ ಯಾವುದೇ ಪಾತ್ರ ಕೊಟ್ಟರು ಆ ಪಾತ್ರಕ್ಕೆ ಜೀವ ತುಂಬುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ ಎಂಬುದಕ್ಕೆ ಕಳೆದ ದಶಕಗಳಲ್ಲಿ ಅವರು ಅಭಿನಯಿಸಿರುವ ಚಿತ್ರಗಳೇ ಜ್ವಲಂತ ಸಾಕ್ಷಿ.
ತೆರೆ ಮುಂದೆ ಹಾಗೂ ಹಿಂದೆ ಸೂರ್ಯ ಒಂದೆ ಎನ್ನುತ್ತಾರೆ ಚಿತ್ರಪ್ರೇಮಿಗಳು. ಆಡಂಬರ ಜೀವನ, ವಿವಾದಗಳು ಇದೆಲ್ಲದರಿಂದ ದೂರ ಉಳಿದಿರುವ ಸೂರ್ಯ ತಮ್ಮ ಸಿನಿಮಾಗಳ ಕೆಲಸದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. 'ಜೈ ಭೀಮ್', 'ಅಂಜನ್', 'ಗಜನಿ', 'ಸಿಂಗಂ', 'ಸಿಂಗಂ 2', '24', 'ಅಯನ್'ನಂತಹ ಸೂಪರ್ಹಿಟ್ ಸಿನಿಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಸೂರ್ಯ, ಇತ್ತೀಚೆಗೆ ಬಾಲಿವುಡ್ನಲ್ಲಿ ತೆರೆಕಂಡ ಅಕ್ಷಯ್ ಕುಮಾರ್ ನಟನೆಯ 'ಸರ್ಫೀರಾ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
'ಸರ್ಫಿರಾ' ಚಿತ್ರವನ್ನು ನಿರ್ದೇಶಕಿ ಸುಧಾ ಕೊಂಗರಾ ನಿರ್ದೇಶಿಸಿದ್ದು, ಚಿತ್ರಮಂದಿರಗಳಲ್ಲಿ ಸಿನಿಮಾಗೆ ಉತ್ತಮ ಓಪನಿಂಗ್ ಸಿಕ್ಕಿಲ್ಲ. ಸದ್ಯದ ಮಟ್ಟಿಗೆ ಮಂದಗತಿಯಲ್ಲೇ ಸಾಗುತ್ತಿರುವ ಅಕ್ಷಯ್ ಕುಮಾರ್ ಸಿನಿಮಾಗೆ ಬಾಕ್ಸ್ ಆಫೀಸ್ನಲ್ಲಿ ಭಾರೀ ಹಿನ್ನಡೆ ಎದುರಾಗಿದೆ. ಈ ಚಿತ್ರಕ್ಕೆ ಸಂಬಂಧಿಸಿದಂತೆ ಕೆಲವು ವಿಷಯಗಳನ್ನು ಹಂಚಿಕೊಳ್ಳುವಾಗ ಸೂರ್ಯ ಅವರ ಒಂದು ಸೀಕ್ರೆಟ್ ಅನ್ನು ನಿರ್ದೇಶಕರು ಇಲ್ಲಿ ಬಹಿರಂಗಪಡಿಸಿದ್ದಾರೆ.
20 ವರ್ಷಗಳ ಹಿಂದೆ ಹೋದ ಸುಧಾ, "ಅಂದು ಮಣಿರತ್ನಂ ಅವರ ನಿರ್ದೇಶನದಲ್ಲಿ ಮೂಡಿಬಂದ 'ಆಯ್ತಾ ಎಳುತ್ತು' ಚಿತ್ರಕ್ಕೆ ಸೂರ್ಯ ಅವರು ನಾಯಕರಾಗಿದ್ದರು. ನಾನು ಸಹ ನಿರ್ದೇಶಕಿ ಆಗಿ ಕೆಲಸ ಮಾಡುತ್ತಿದ್ದೆ. ಸೂರ್ಯರ ಅಭಿನಯವನ್ನು ಏಕೆ ಅವರ ಅಭಿಮಾನಿಗಳು ಅಥವಾ ಸಿನಿಪ್ರಿಯರು ಅಷ್ಟೊಂದು ಮೆಚ್ಚಿಕೊಳ್ಳುತ್ತಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಸಿನಿಮಾದಲ್ಲಿ ಒಂದು ಸೀನ್ ಇತ್ತು. ಅದನ್ನು ಮೊದಲ ಟೇಕ್ನಲ್ಲೇ ಮುಗಿಸಿದ್ದ ಸೂರ್ಯಗೆ ಮಣಿರತ್ನಂ ಓಕೆ ಅಂದಿದ್ದರು. ಆದ್ರೆ, ಅದನ್ನು ಒಪ್ಪದ 'ಸಿಂಗಂ', ನನಗ್ಯಾಕೋ ಅದು ಸರಿಯಾಗಿ ಬಂದಿದೆ ಅನಿಸಲಿಲ್ಲ ಎಂದು 26 ಟೇಕ್ಗಳನ್ನು ತೆಗೆದುಕೊಂಡು ಕಡೆಗೆ ಮುಗಿಸಿದರು. ಇದು ಅವರ ಪರಿಶ್ರಮ, ಬದ್ಧತೆ ಮತ್ತು ತುಡಿತವನ್ನು ತೋರಿಸುತ್ತದೆ" ಎಂದು ಕೊಂಡಾಡಿದರು.