

ವಿಜಯವಾಣಿ ಸುದ್ದಿಜಾಲ ಬೆಂಗಳೂರು
‘ರಾಮಾ ರಾಮಾ ರೇ’, ‘ಒಂದಲ್ಲಾ ಎರಡಲ್ಲಾ’, ‘ಮ್ಯಾನ್ ಆ್ ದಿ ಮ್ಯಾಚ್’ ಖ್ಯಾತಿಯ ರಾಜ್ಯಪ್ರಶಸ್ತಿ, ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಸತ್ಯಪ್ರಕಾಶ್ ಚೊಚ್ಚಲ ಬಾರಿಗೆ ನಟಿಸುತ್ತಿರುವ ಸಿನಿಮಾ ‘ಎಕ್ಸ್ ಆ್ಯಂಡ್ ವೈ’. ಇದೊಂದು ಫ್ಯಾಂಟಸಿ ಹ್ಯೂಮರ್ ಚಿತ್ರವಾಗಿದ್ದು, ಸತ್ಯಪ್ರಕಾಶ್ ಮತ್ತು ಅಥರ್ವ ಮುಖ್ಯ ಭೂಮಿಕೆಯಲ್ಲಿ ನಟಿಸಲಿದ್ದಾರೆ.
ಇಂದಿನಿಂದ ಚಿತ್ರೀಕರಣ ಪ್ರಾರಂಭವಾಗಲಿದ್ದು, ನಟ, ನಿರ್ದೇಶಕ ಸತ್ಯಪ್ರಕಾಶ್, ‘45ರಿಂದ 50 ದಿನ ಚಿತ್ರೀಕರಣ ನಡೆಸುವ ಶೆಡ್ಯುಲ್ ಹಾಕಿಕೊಂಡಿದ್ದೇವೆ. ಶೇಕಡಾ 70ರಿಂದ 80ರಷ್ಟು ಶೂಟಿಂಗ್ ಬೆಂಗಳೂರಿನಲ್ಲಿ ನಡೆಯಲಿದೆ. ಉಳಿದ ಭಾಗವನ್ನು ಮಂಗಳೂರಿನ ಸುಂದರ ಪರಿಸರದಲ್ಲಿ ಚಿತ್ರೀಕರಣ ನಡೆಸಲಿದ್ದೇವೆ. ಮೊದಲ ಶೆಡ್ಯುಲ್ನಲ್ಲಿ 10 ದಿನಗಳ ಶೂಟಿಂಗ್ ನಡೆಸಿ ನಂತರ ಹೊಸ ವರ್ಷಕ್ಕೆ ಬ್ರೇಕ್ ಇರಲಿದೆ. ಮಾರ್ಚ್ ಒಳಗೆ ಚಿತ್ರೀಕರಣ ಪೂರ್ಣಗೊಳಿಸಿ, ಬೇಸಗೆ ರಜೆಗೆ ಸಿನಿಮಾ ರಿಲೀಸ್ ಮಾಡುವ ಪ್ಲ್ಯಾನ್ ಇದೆ’ ಎಂದು ಮಾಹಿತಿ ನೀಡುತ್ತಾರೆ.
ಇಲ್ಲಿ ಎಲ್ಲವೂ ಹೆಚ್ಚು!
ನಿರ್ದೇಶಕ ಸತ್ಯಪ್ರಕಾಶ್ ಸಾಮಾನ್ಯವಾಗಿ 35 ದಿನಗಳಲ್ಲಿ ಶೂಟಿಂಗ್ ಮುಗಿಸುತ್ತಿದ್ದರಂತೆ. ಆದರೆ, ‘ಎಕ್ಸ್ ಆ್ಯಂಡ್ ವೈ’ಗೆ 10ರಿಂದ 15 ದಿನ ಹೆಚ್ಚುವರಿ ಚಿತ್ರೀಕರಣ ನಡೆಸಲಿದ್ದಾರೆ. ‘ಶೂಟಿಂಗ್ ನಡೆಸುವ ದಿನಗಳು, ಬಜೆಟ್, ಹೊಸ ಮತ್ತು ಅನುಭವಿ ಕಲಾವಿದರೂ ಸಾಕಷ್ಟು ಸಂಖ್ಯೆಯಲ್ಲಿ ಇರಲಿದ್ದಾರೆ. ಹಾಗೇ ನನ್ನ ಈ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಇಲ್ಲಿ ಹಾಡುಗಳ ಸಂಖ್ಯೆಯೂ ಹೆಚ್ಚಿದೆ, ವಿಎ್ಎಕ್ಸ್ ಹೆಚ್ಚಿರಲಿದೆ’ ಎಂದು ಹೇಳಿಕೊಳ್ಳುತ್ತಾರೆ ಸತ್ಯಪ್ರಕಾಶ್. ಮಾಸ್ ಪ್ರೇಕ್ಷಕರಿಗೆ ಇಷ್ಟವಾಗುವ ಅಂಶಗಳನ್ನಿಟ್ಟುಕೊಂಡು ಸತ್ಯಪ್ರಕಾಶ್ ಕಥೆ ಮಾಡಿಕೊಂಡಿದ್ದು, ವಾಸುಕಿ ವೈಭವ್ ಸಂಗೀತ ಸಂಯೋಜಿಸುತ್ತಿದ್ದಾರೆ.