

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಇದೀಗ 11ನೇ ವಾರಕ್ಕೆ ಕಾಲಿಟ್ಟಿದ್ದು, ಮನೆಯೊಳಗೆ ಸ್ಪರ್ಧಿಗಳು ಬಿಳಿ ಬಟ್ಟೆಗಳಿಗೆ ಬಣ್ಣ ಬಳಿಯುವ ಭರಾಟೆಯಲ್ಲಿ ಪರಸ್ಪರ ಗುದ್ದಾಡಿಕೊಂಡಿದ್ದಾರೆ! ಇದೀಗ ಇದೆಲ್ಲಾ ಮುಗಿಯಿತು ಅಂತ ಹೇಳುವಷ್ಟರಲ್ಲೇ ಸದಸ್ಯರ ನಡುವೆ ಬಿಡ್ಡಿಂಗ್ ಶಬ್ದ ಜೋರಾಗಿಯೇ ಸಾಗಿದೆ. ತಂಡ ರಚನೆಯಲ್ಲಿ ಗುಪ್ತವಾಗಿದ್ದ ಖರೀದಿ ಕೆಲಸ ಈಗ ಖುಲ್ಲಂಖುಲ್ಲಾ ನಡೆಯುತ್ತಿದೆ.
ಒಂದು ದಿನದ ಟಾಸ್ಕ್ ಮುಗಿದ ಬೆನ್ನಲ್ಲೇ ತನಿಷಾ ಮತ್ತು ಸಂಗೀತಾಗೆ ಬಿಗ್‌ಬಾಸ್ ಮತ್ತೊಂದು ಬಿಡ್ಡಿಂಗ್ ಪ್ರಕ್ರಿಯೆ ಮಾಡಲು ಸೂಚಿಸಿದ್ದಾರೆ. ವಿನಯ್ ಮತ್ತು ನಮ್ರತಾ ಅವರನ್ನು ಹೊರತುಪಡಿಸಿ ಎಲ್ಲ ಆಟಗಾರರ ಪೈಕಿ ತಲಾ ಮೂವರು ಆಟಗಾರರನ್ನು ಖರೀದಿಸಬೇಕು ಎಂದು ಬಿಗ್‌ಬಾಸ್ ಹೇಳಿದ್ದಾರೆ. ಆದ್ರೆ, ಕಾರ್ತಿಕ್ ಅವರನ್ನು ಕೊಂಡುಕೊಳ್ಳುವ ಸರದಿ ಬಂದಾಗ ತನಿಷಾ ಮತ್ತು ಸಂಗೀತಾ ಇಬ್ಬರೂ ಬಿಡ್ ಮಾಡದೆ ಮೌನವಾಗಿದ್ದಾರೆ. ಇದರ ಮೇಲೆ ತನಿಷಾ, ‘ನನ್ನ ಕಳಪೆ ಖರೀದಿ ಕಾರ್ತಿಕ್' ಎಂದು ಖಡಕ್ ಆಗಿ ಹೇಳಿದರು.
ಈ ಪ್ರಕ್ರಿಯೆ ನೋಡಿದ ತುಕಾಲಿ ಸಂತೋಷ್, ‘ಅವನಿಗೋಸ್ಕರ ಗುದ್ದಾಡಿದ ಅದೇ ಫ್ರೆಂಡ್ಸು, ಇಂದು ಅವನನ್ನೇ ಹತ್ತು ರೂಪಾಯಿಗೂ ಕೇಳಿಲಿಲ್ಲ’ ಎಂದು ವರ್ತೂರು ಸಂತೋಷ್ಗೆ ತಿಳಿಸಿದ್ದಾರೆ. ಕಳೆದ ಸಲ ಸಂಗೀತಾ ಅವರಿಂದ ಹಣ ತೆಗೆದುಕೊಂಡು ನಂತರ ಪಕ್ಷ ಬದಲಾಯಿಸಿ ತನಿಷಾ ಹೆಚ್ಚು ಹಣ ಕೊಡುತ್ತಾರೆ ಎಂಬ ಕಾರಣಕ್ಕೆ ಅವರ ತಂಡ ಸೇರಿಕೊಂಡಿದ್ದರು ಕಾರ್ತಿಕ್. ಆಗ ವ್ಯಕ್ತಿಗತ ಆಟ ಮತ್ತು ನೈತಿಕತೆಯ ಬಗ್ಗೆಯೂ ಮಾತುಕತೆಗಳು ನಡೆದಿದ್ದವು. ಸದ್ಯ ಈ ಪಕ್ಷಾಂತರವೇ ಇಂದು ಕಾರ್ತಿಕ್‌ಗೆ ಮುಳುವಾದಂತಿದೆ.
ಹಾಗಾದ್ರೆ ಸಂಗೀತಾ ಮತ್ತು ತನಿಷಾ ಇಬ್ಬರೂ ಯಾರು ಯಾರನ್ನೆಲ್ಲ ಖರೀದಿಸಿದ್ದಾರೆ? ಯಾವ ಬೆಲೆಗೆ ಕೊಂಡುಕೊಂಡಿದ್ದಾರೆ? ಎಂಬುದನ್ನು ತಿಳಿದುಕೊಳ್ಳಲು ಇಂದಿನ ಸಂಚಿಕೆ ವೀಕ್ಷಿಸಬೇಕಿದೆ. ದಿನದ 24 ಗಂಟೆಗಳ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.