ಮಂಸೋರೆ ಮನಸೂರೆಗೊಳಿಸಿದ ಅಖಿಲಾ; ಇಂದು ನಡೆಯಿತು ನಿಶ್ಚಿತಾರ್ಥ, ಮದ್ವೆ ದಿನ ಹಾರಲಿದೆ ತಿರಂಗ!

Feat
Published on

ಬೆಂಗಳೂರು: ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮಂಸೋರೆ ಅವರ ನಿಶ್ಚಿತಾರ್ಥ ಇಂದು ಅಖಿಲಾ ಅವರ ಜತೆ ಬೆಂಗಳೂರಿನಲ್ಲಿ ನಡೆದಿದೆ. ಕೋವಿಡ್​ ಪರಿಸ್ಥಿತಿಯ ಕಾರಣಕ್ಕೆ ಕುಟುಂಬಸ್ಥರು ಹಾಗೂ ಅತ್ಯಾಪ್ತರ ಸಮ್ಮುಖದಲ್ಲಿ ಇಂದು ಸರಳವಾಗಿ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿದ್ದು, ಇಬ್ಬರೂ ಉಂಗುರ ವಿನಿಮಯ ಮಾಡಿಕೊಂಡಿದ್ದಾರೆ.

2014ರಲ್ಲಿ ಮಂಸೋರೆ ಅವರು ಮೊದಲು ನಿರ್ದೇಶಿಸಿದ 'ಹರಿವು' ಚಿತ್ರಕ್ಕೆ ಉತ್ತಮ ಪ್ರಾದೇಶಿಕ ಚಿತ್ರ ರಾಷ್ಟ್ರಪ್ರಶಸ್ತಿ ಬಂದಿತ್ತು. ಹರಿವು ಚಿತ್ರದಲ್ಲಿ 'ಸಂಚಾರಿ ವಿಜಯ್' ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದರು. ಮಂಸೋರೆ ನಿರ್ದೇಶನದಲ್ಲಿ, ಶೃತಿ ಹರಿಹರನ್ ಮತ್ತು ಸಂಚಾರಿ ವಿಜಯ್ ನಟಿಸಿ, 2018ರಲ್ಲಿ ಬಿಡುಗಡೆಯಾಗಿದ್ದ 'ನಾತಿಚರಾಮಿ' ಚಿತ್ರಕ್ಕೆ ಉತ್ತಮ ಪ್ರಾದೇಶಿಕ ಚಿತ್ರ ರಾಷ್ಟ್ರಪ್ರಶಸ್ತಿ, ಮಂಸೋರೆ ಅವರಿಗೆ ಉತ್ತಮ ಸಾಹಿತ್ಯಕ್ಕೆ ರಾಷ್ಟ್ರಪ್ರಶಸ್ತಿ ಮತ್ತು ಇತರೆ ಮೂರು ವಿಭಾಗಗಳಲ್ಲಿ ರಾಷ್ಟ್ರಪ್ರಶಸ್ತಿ ಗೌರವ ಸಿಕ್ಕಿದ್ದು, ಅದೇ ಚಿತ್ರದ ನಿರ್ದೇಶನಕ್ಕಾಗಿ ಮಂಸೋರೆ ಅವರಿಗೆ ಉತ್ತಮ ನಿರ್ದೇಶಕ ಫಿಲ್ಮ್ ಫೇರ್ ಪ್ರಶಸ್ತಿಯ ಗರಿ ಸಿಕ್ಕಿತ್ತು. ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ನೇತೃತ್ವದ, 'ಬದಲಾದ ಭಾರತ' ಎಂಬ ಯೋಜನೆಯಡಿಯಲ್ಲಿ ಆಯ್ಕೆಯಾದ ಸಿನಿಮಾಗಳ ಪಟ್ಟಿಯಲ್ಲಿ 'ನಾತಿಚರಾಮಿ' ಚಿತ್ರವೂ ಒಂದಾಗಿತ್ತು.

ಮಂಸೋರೆ ನಿರ್ದೇಶನದ ಮೂರನೇ ಚಲನಚಿತ್ರ "ಆ್ಯಕ್ಟ್-1978" ಕಳೆದ ವರ್ಷ ದೀರ್ಘಕಾಲದ ಲಾಕ್​ಡೌನ್​ ನಂತರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮೊದಲ ದಕ್ಷಿಣ ಭಾರತದ ಚಲನಚಿತ್ರ ಎಂದೇ ಖ್ಯಾತಿಯಾಗಿತ್ತು. ಕೊರೋನಾ ಲಾಕ್​ಡೌನ್​ ನಂತರ ಸಿನಿಮಾಗಳನ್ನು ಬಿಡುಗಡೆ ಮಾಡಲು ಚಿತ್ರರಂಗ ಹಿಂದೇಟು ಹಾಕುತ್ತಿದ್ದ ವೇಳೆಯಲ್ಲಿ ಬಿಡುಗಡೆಯಾದ 'ಆ್ಯಕ್ಟ್-1978' ಚಿತ್ರಕ್ಕೆ ದೊಡ್ಡಮಟ್ಟದಲ್ಲಿ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

ಸದ್ಯಕ್ಕೆ ಮಂಸೋರೆ ಅವರು 'ರಾಣಿ ಅಬ್ಬಕ್ಕ'ನ ಕುರಿತಾದ ಚಿತ್ರ ಮಾಡುವ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದು, ಅದರ ಚಿತ್ರೀಕರಣಕ್ಕೆ ಹೋಗುವ ಮುನ್ನ ಮತ್ತೊಂದು ಚಿತ್ರ ಮಾಡುವ ಬಗ್ಗೆ ಯೋಚಿಸುತ್ತಿದ್ದು, ಮದುವೆಯ ಬಳಿಕ ಮುಂದಿನ ಚಿತ್ರದ ಘೋಷಣೆ ಮಾಡುವುದಕ್ಕೆ ಸಿದ್ಧತೆಗಳನ್ನು ನಡೆಸಿದ್ದಾರೆ. ಮಂಸೋರೆ-ಅಖಿಲಾ ಅವರ ಮದುವೆಗೆ ಆಗಸ್ಟ್​ 15ರ ದಿನಾಂಕ ನಿಗದಿಯಾಗಿದ್ದು, ಸ್ವಾತಂತ್ರ್ಯೋತ್ಸವದಂದು ಇಬ್ಬರೂ ಸಪ್ತಪದಿ ತುಳಿಯಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net