

ವಿಜಯವಾಣಿ ಸುದ್ದಿಜಾಲ ಬೆಂಗಳೂರು
‘ಒಲವೇ ಮಂದಾರ’, ‘ಬ್ಯೂಟಿುಲ್ ಮನಸುಗಳು’, ‘ಬನಾರಸ್’ನಂತಹ ಸಿನಿಮಾಗಳನ್ನು ನಿರ್ದೇಶಿಸಿರುವ ಅವರು, ಇದೇ ಮೊದಲ ಬಾರಿಗೆ ‘ಕೈವ’ ಚಿತ್ರದ ಮೂಲಕ ರಾ, ಆ್ಯಕ್ಷನ್ ರೌಡಿಸಂ ಕಥೆ ಹೇಳಲು ಹೊರಟಿದ್ದಾರೆ. ಅಂದಹಾಗೆ ಧನ್ವೀರ್ ಮತ್ತು ಮೇಘಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದ ಕಥೆ ಹುಟ್ಟಿದ್ದು ಶವಾಗಾರದಲ್ಲಂತೆ.
ಈ ಬಗ್ಗೆ ಜಯತೀರ್ಥ, ‘ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ‘ಬೆಲ್ ಬಾಟಂ’ ಚಿತ್ರದ ಶೂಟಿಂಗ್ ವೇಳೆ ಸೀನ್ ಒಂದಕ್ಕೆ ಮೃತ ಶರೀರದ ಮೇಲೆ ಹರಿದಾಡುವ ಹುಳಗಳು ಬೇಕಿತ್ತು. ಅದನ್ನು ತರಲು ನಾನು ಹತ್ತಿರದಲ್ಲಿದ್ದ ಒಂದು ಶವಾಗಾರಕ್ಕೆ ತೆರಳಿದೆ. ಅಲ್ಲಿ ಆಗಷ್ಟೇ ಒಂದು ಪೋಸ್ಟ್ ಮಾರ್ಟಂ ನಡೆಯುತ್ತಿತ್ತು. ಶವಾಗಾರದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಮಾತನಾಡಿಸಿದೆ. ಆತ ಪ್ರತಿದಿನ ಐದಾರು ಪೋಸ್ಟ್ ಮಾರ್ಟಂ ಮಾಡುತ್ತೇವೆ. ಒಮ್ಮೆ ಒಂದೇ ದಿನ 11 ಪೋಸ್ಟ್ ಮಾರ್ಟಂ ಮಾಡಿದ್ದೂ ಇದೆ ಎಂದು ಹೇಳಿಕೊಂಡರು. ನಾನು ಕುತೂಹಲಕ್ಕೆ ದೇಹವನ್ನು ನೋಡಿ ಭಯಗೊಂಡ ಉದಾಹರಣೆ ಏನಾದರೂ ಇದೆಯಾ ಅಂತ ಕೇಳಿದೆ. ಅದಕ್ಕವರು ‘1983 ಇರಬೇಕು, ನನಗಾಗ 18, 19 ವರ್ಷ. ಒಂದು ಮರ್ಡರ್ ಕೇಸ್ ಬಂದಿತ್ತು. ಆ ಛಿದ್ರವಾದ ದೇಹವನ್ನು ನೋಡಿ ದಿಗಿಲಾಗಿತ್ತು. ಪ್ರೀತಿಗಾಗಿ ವ್ಯಕ್ತಿಯೊಬ್ಬ ಹಾಗೆ ಕೊಂದಿದ್ದ’ ಎಂದರು’ ಎಂದು ಮಾಹಿತಿ ನೀಡುತ್ತಾರೆ ಜಯತೀರ್ಥ. ಆ ಘಟನೆಯ ಬೆನ್ನತ್ತಿ ತಿಗಳರಪೇಟೆಗೆ ಹೋದ ನಿರ್ದೇಶಕರು ಒಬ್ಬೊಬ್ಬರನ್ನೇ ಭೇಟಿಯಾಗಿ, ವಿಷಯ ಕಲೆಹಾಕಿದ್ದಾರೆ.
ಇದೇ ಕೊನೆ ಇನ್ನೊಮ್ಮೆ ಬರಬೇಡ!
‘ಕೈವ’ ಚಿತ್ರದಲ್ಲಿ ನೈಜ ಘಟನೆಗಳ ಆಧಾರಿತ ಚಿತ್ರವಾಗಿದ್ದರೂ, ಪಾತ್ರಗಳ ಹೆಸರನ್ನು ಬದಲಿಸಲಾಗಿದೆ. ‘‘ಕೈವ’ ಕಾಲ್ಪನಿಕ ಹೆಸರು. ಆ ವ್ಯಕ್ತಿ ಈಗಲೂ ಇದ್ದಾರೆ. ಅವರು ಮೊದಲು ಘಟನೆ ಬಗ್ಗೆ ತಿಳಿಸಲು ಹಿಂಜರಿದರು. ಏಕೆಂದರೆ ಅವರ ಮಕ್ಕಳಿಗೂ ಈ ವಿಷಯಗಳು ಗೊತ್ತಿಲ್ಲವಂತೆ. ಹೀಗಾಗಿಯೇ ‘ಈಗ ಬಂದಿದ್ದೀಯಾ, ಆದರೆ ಇನ್ನೊಮ್ಮೆ ಇಲ್ಲಿಗೆ ಬರಬೇಡ’ ಎಂದು, ಘಟನೆಗಳ ಬಗ್ಗೆ ತಿಳಿಸಿದರು. ಅದೇ ರೀತಿ ಈ ಘಟನೆಗೆ ಸಂಬಂಧಿಸಿದ ಬಹುತೇಕ ವ್ಯಕ್ತಿಗಳನ್ನು, ಕುಟುಂಬದವರ ಬಳಿಯೂ ಒಪ್ಪಿಗೆ ಪಡೆದಿದ್ದೇನೆ. ಜತೆಗೆ ಕೆಲವರಿಗೆ ಸಿನಿಮಾ ಕೂಡ ತೋರಿಸಿದ್ದೇನೆ’ ಎಂದು ಹೇಳಿಕೊಳ್ಳುತ್ತಾರೆ ಜಯತೀರ್ಥ.