‘ಜೊತೆ ಜೊತೆಯಲಿ’ ಸೆಟ್‌ನಲ್ಲಿ ಅನಿರುದ್ಧ್ ಹೇಗಿರುತ್ತಿದ್ದರು? ಸಾಕಷ್ಟು ಸಂಗತಿ ಬಯಲು ಮಾಡಿದ ನಿರ್ದೇಶಕ

1329067
Published on

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿಯ ಶೂಟಿಂಗ್ ಸೆಟ್‌ನಲ್ಲಿ ಅದರ ನಾಯಕ ನಟ ಅನಿರುದ್ಧ್ ಎಲ್ಲರೊಂದಿಗೆ ಹೇಗೆ ನಡೆದುಕೊಳ್ಳುತ್ತಿದ್ದರು ಎಂಬುದನ್ನು ನಿರ್ದೇಶಕ ಆರೂರ್ ಜಗದೀಶ್ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಮೊದಲ ಸಲ ಅನಿರುದ್ಧ್ ಜತೆ ಕಿರಿಕ್ ಆಗಿದ್ದು ಎಲ್ಲಿ, ಹೇಗೆ, ಯಾವ ಕಾರಣಕ್ಕೆ, ಆನಂತರ ಅವರ ವರ್ತನೆ ಹೇಗೆ ಅದೇ ರೀತಿ ಬೆಳೆಯುತ್ತ ಹೋಯ್ತು ಎಂಬುದರ ಸಂಪೂರ್ಣ ವಿವರವನ್ನು ಅವರು ನೀಡಿದ್ದಾರೆ.

ಅನಿರುದ್ಧ್ ಬಗ್ಗೆ ಆರೂರ್ ಜಗದೀಶ್ ಹೊರಗೆಡವಿರುವ ಸಂಗತಿಗಳನ್ನು ಅವರ ಮಾತಿನಲ್ಲೇ ಓದಿ. ‘‘ವಿಷ್ಣುವರ್ಧನ್ ಅಳಿಯ ಎಂಬ ಕಾರಣಕ್ಕೆ ನಮಗೆ ಅವರ ಮೇಲೆ ಅಪಾರ ಗೌರವ. ಜನಪ್ರಿಯತೆ ಜಾಸ್ತಿ ಆಗ್ತಿದ್ದ ಹಾಗೆ ಅವರು ಕೂಡ ಬದಲಾಗ್ತಾ ಹೋದ್ರು. ಇಡೀ ಧಾರಾವಾಹಿ ಮೇಲೆ ಏನೋ ಒಂಥರಾ ಹಿಡಿತ ಸಾಧಿಸಲು ಹೊರಟರು. ಡೈಲಾಗು, ಶೂಟಿಂಗ್ ವಾತಾವರಣ ಎಲ್ಲ ಕೆಟ್ಟಿತು. ನಾವು ಪದೇಪದೆ ಅವರಿಗೆ ‘ಇದು ಸಿನಿಮಾ ಅಲ್ಲ ಸರ್ ಸೀರಿಯಲ್’ ಅಂತ ನೆನಪು ಮಾಡ್ತಾ ಇದ್ದೆವು. ಆದರೂ ಅವರಿಗೆ ಅರ್ಥ ಆಗಲಿಲ್ಲ. ಮೊದಲು ನಾವು ಆರ್‌ಆರ್ ನಗರದ ಬೀದಿಗಳಲ್ಲಿ ಕುಳಿತು ಶೂಟಿಂಗ್ ಮಾಡ್ತಾ ಇದ್ದೆವು. ಆಗ ಬೀದಿಯಲ್ಲಿ ಚೇರಲ್ಲಿ ಕುಳಿತುಕೊಂಡು, ತಿಂಡಿ ತಿನ್ಕೊಂಡು ಊಟ ಮಾಡ್ಕೊಂಡು ಇದ್ದೆವು. ಈಗ ಕ್ಯಾರವಾನ್ ಇಲ್ಲದಿದ್ದರೆ ಶೂಟಿಂಗ್‌ಗೇ ಬರಲ್ಲ. ಆ ಥರಾ ವಾತಾವರಣ ಬೆಳೆದುಬಿಟ್ಟಿತು.’’

ಮೊದಲ ಕಿರಿಕ್

‘‘ಮೊತ್ತ ಮೊದಲ ಬಾರಿಗೆ ಎಲ್ಲಿ ಕಿರಿಕ್ ಆಯ್ತು ಅಂದ್ರೆ ಒಂದು ಫ್ಯಾಕ್ಟರಿಯಲ್ಲಿ ಸೀನ್ ಮಾಡುವಾಗ ಎಲ್ಲಾ ಸೀನ್ ಪೇಪರ್‌ಗಳನ್ನೂ ಅವರಿಗೆ ಕೊಟ್ಟಿದ್ದೆವು, ಅವರು ಓದಿದ್ದರು. ಯಾವುದೋ ಒಂದು ಸೀನ್‌ಗೆ ಕ್ರಿಯೇಟಿವಿಟಿ ಕಾರಣಕ್ಕಾಗಿ ಸ್ವಲ್ಪ ಸೇರಿಸುವುದಿತ್ತು. ಅದನ್ನು ಸೇರಿಸಿದರೆ ಆ ಎಪಿಸೋಡ್ ಚೆನ್ನಾಗಿ ಆಗುತ್ತಿತ್ತು. ‘‘ನನಗೆ ಈಗ ಕೊಡ್ತಾ ಇದೀರಾ? ನಾನು ಮಾಡಲ್ಲ ಇದನ್ನ’’ ಎಂದು ರೇಗಿದರು. ದೊಡ್ಡ ಗಲಾಟೆ ಮಾಡಿದರು. ಆದರೆ ಆ ಅರ್ಧ ತಾಸಿನ ಸೀನ್‌ಗೆ ಪುನಃ ಫ್ಯಾಕ್ಟರಿಗೆ ಹೋಗಿ ಶೂಟ್ ಮಾಡಲು ಸಾಧ್ಯವಾಗುವುದಿಲ್ಲ. ಸೆಟ್ ಎಲ್ಲಾ ರೆಡಿ ಇದೆ. ಎಕ್ಸ್‌ಟ್ರಾ ಇರೋದು 8 ಲೈನ್‌ಗಳು. ಹೇಳಬೇಕಾದ ಡೈಲಾಗ್ಸ್. ಇವರು ರೇಗಿದ್ದರಿಂದ ಒಂದು ಗಂಟೆ ಶೂಟಿಂಗ್ ನಿಂತುಬಿಟ್ಟಿತು. ಇಡೀ ಸೆಟ್‌ನ ವಾತಾವರಣ ಫುಲ್ ಹಾಳಾಗಿಹೋಯಿತು. ಅಲ್ಲಿ ಹೇಗೆ ಅಂದ್ರೆ ಒಬ್ಬ ನಿರ್ದೇಶಕನಿಗೂ ಬೆಲೆ ಇಲ್ಲ. ನಿರ್ಮಾಪಕನಿಗೂ ಬೆಲೆ ಇಲ್ಲ. ತೀರಾ ಅವಮಾನ ಆಗೋಯ್ತು. ನಾನು ಎಷ್ಟು ಸಮಾಧಾನ ಮಾಡಿದರೂ ಅನಿರುದ್ಧ ಅವರು ಕೇಳಲಿಲ್ಲ. ಆಮೇಲೆ ಒಂದು-ಒಂದೂವರೆ ಗಂಟೆಯಾದ ಮೇಲೆ ‘‘ಸರಿ ಸರಿ, ಸ್ಸಾರಿ... ಮಾಡ್ತೀನಿ ಮಾಡ್ತೀನಿ’’ ಅಂದರು. ಆದರೆ ಅಷ್ಟೊತ್ತಿಗೆ ಮಾನಸಿಕವಾಗಿ ಸಾಕಷ್ಟು ಘಾಸಿ ಆಗಿಹೋಗಿತ್ತು. ಆರಂಭದಲ್ಲಿ ನಾವೆಲ್ಲ ಜತೆಜತೆಯಲ್ಲಿ ಎಷ್ಟು ಕಷ್ಟಪಟ್ಟಿದ್ದೇವೆ ಅಂದರೆ, ನಮ್ಮೆಲ್ಲ ಹಣ-ಒಡವೆಗಳನ್ನು ಅಡವಿಟ್ಟು ಈ ಸೀರಿಯಲ್‌ಗೆ ತಂದು ಹಾಕಿದ್ದೇವೆ. ದುಡ್ಡು ಸಾಕಾಗುತ್ತಲೇ ಇರಲಿಲ್ಲ. ಅಷ್ಟು ಕಷ್ಟಪಟ್ಟು ಹಾಕಿದ್ದಕ್ಕೇ ಫ್ರೇಮ್‌ನಲ್ಲಿ ಅಷ್ಟು ವಿಜೃಂಭಣೆ ಕಾಣಿಸಿದ್ದು. ಬೆಂಜ್ ಕಾರು, ಹೆಲಿಕಾಪ್ಟರು ಎಲ್ಲಿಂದ ಬಂತು? ಇದು ಮೊದಲ ಗಲಾಟೆ ಆಗಿದ್ದು ಅವರದು’’ ಎಂದು ಆರೂರ್ ಜಗದೀಶ್ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net