

ಕೆ.ಆರ್.ಪುರ: ಪಾನಮತ್ತನಾಗಿದ್ದ ಯುವಕನೊಬ್ಬ ಹೈ-ವೋಲ್ಟೇಜ್ ವಿದ್ಯುತ್ ಕಂಬಕ್ಕೇರಿ, ಗಂಟೆಗಟ್ಟಲೆ ಅಲ್ಲೇ ಇದ್ದು ಸತಾಯಿಸಿದ ಪ್ರಸಂಗವೊಂದು ನಡೆದಿದೆ. ರಾಜಧಾನಿ ಬೆಂಗಳೂರಿನ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮಾರಗೊಂಡನಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ಯುವಕನ ಹೆಸರು ಅನಂತ ರಾಜ್ ಎಂದು ತಿಳಿದುಬಂದಿದೆ. ಮಾರಗೊಂಡನಹಳ್ಳಿ ಸಮೀಪ ಇಂದು ಸಂಜೆ ಐದು ಗಂಟೆಗೆ ವಿದ್ಯುತ್ ಕಂಬವನ್ನೇರಿದ್ದ. ಇದನ್ನು ನೋಡಿದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಧಾವಿಸಿದ್ದು, ಆತನನ್ನು ಕೆಳಕ್ಕೆ ಇಳಿಸಲು ಹರಸಾಹಸ ನಡೆಸಿದರು. ರಾತ್ರಿ 11ರ ವರೆಗೂ ಈತ ಕಂಬದ ಮೇಲೆ ಕುಳಿತಿದ್ದ. ಕೊನೆಗೂ ಈತನನ್ನು ಇಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈತ ಆನೇಕಲ್-ಚಂದಾಪುರ ಭಾಗದವ ಎನ್ನಲಾಗಿದ್ದು, ಈತನನ್ನು ಆವಲಹಳ್ಳಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ದಿದ್ದಾರೆ.