

ಸುಶಾಮತ್ ಸಿಂಗ್ ರಜಪೂತ್ ಅಭಿನಯದ ಕೊನೆಯ ಚಿತ್ರವಾದ 'ದಿಲ್ ಬೇಚಾರಾ' ಕೆಲವು ದಿನಗಳ ಹಿಂದಷ್ಟೇ ಡಿಸ್ನಿ ಹಾಟ್ಸ್ಟಾರ್ನಲ್ಲಿ ಬಿಡುಗಡೆಯಾಗಿದೆ. ಚಿತ್ರವನ್ನು ನೋಡಿದವರೆಲ್ಲರೂ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.
ಸಾಮಾನ್ಯವಾಗಿ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾದರೆ, ಮೊದಲ ದಿನದ ಕಲೆಕ್ಷನ್ ಎಷ್ಟು ಎಂದು ಲೆಕ್ಕ ಹಾಕಬಹುದು. ಆದರೆ, ಓವರ್ ದಿ ಟಾಪ್ (ಓಟಿಟಿ)ಯಲ್ಲಿ ಅಂಥದ್ದೊಂದು ಪರಿಪಾಠವಿಲ್ಲ. ಅಲ್ಲೇನಿದ್ದರೂ, ಎಷ್ಟು ವ್ಯೂಸ್ (ವೀಕ್ಷಣೆ) ಎಂದು ಲೆಕ್ಕ ಹಾಕಲಾಗುತ್ತದೆ.
ಅದರ ಪ್ರಕಾರ, ಚಿತ್ರ ಬಿಡುಗಡೆಯಾದ 24 ಗಂಟೆಗಳಲ್ಲಿ 95 ಮಿಲಿಯನ್ ವ್ಯೂಸ್ ಸಿಕ್ಕಿದೆಯಂತೆ. ಅಂದರೆ, 95 ಕೋಟಿಯಾಗುತ್ತದೆ. ಒಂದು ಟಿಕೆಟ್ನ ಬೆಲೆ ನೂರು ರೂಪಾಯಿ ಎಂದಿಟ್ಟುಕೊಂಡರೂ, 950 ಕೋಟಿಯಾಗುತ್ತದೆ. ಆದರೆ, ಎಲ್ಲಾ ಕಡೆ ಒಂದೊಂದು ಟಿಕೆಟ್ಗೆ 200 ರೂಪಾಯಿಗೂ ಹೆಚ್ಚಿರುತ್ತದೆ. ಇದನ್ನು ಲೆಕ್ಕ ಹಾಕಿದರೆ, ಸುಮಾರು 2000 ಕೋಟಿಯಷ್ಟು ಆಗುತ್ತದೆ ಎಂದು ಹೇಳಲಾಗುತ್ತದೆ. ಇದು ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಎಂದು ಹೇಳಲಾಗುತ್ತಿದೆ.
ಇದನ್ನೇ ಚಿತ್ರಮಂದಿರದ ಲೆಕ್ಕದಲ್ಲಿ ತೆಗೆದುಕೊಳ್ಳುವುದಾದರೆ, ಇಷ್ಟೊಂದು ಹಣ ಒಂದು ದಿನ ಸಂಗ್ರಹವಾದ ಉದಾಹರಣೆಯೇ ಇಲ್ಲ. ಇದುವರೆಗೂ ಎಂಥಾ ದೊಡ್ಡ ಚಿತ್ರವಾದರೂ, ದಿನಕ್ಕೆ ಹೆಚ್ಚೆಂದರೆ 100-120 ಕೋಟಿ ಕಲೆಕ್ಷನ್ ಆಗುತಿತ್ತು. ಆದರೆ, 'ದಿಲ್ ಬೇಚಾರಾ' ಚಿತ್ರವು ಅದರ 20ರಷ್ಟು ಹಣವನ್ನು ಒಂದೇ ದಿನ ದುಡಿದಿದೆ ಎನ್ನುವುದು ವಿಶೇಷ.
ಇದಕ್ಕೂ ಮುನ್ನ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾದ 'ಎಕ್ಸ್ಟ್ರಾಕ್ಷನ್' ಚಿತ್ರವು ಇಂಥದ್ದೊಂದು ದಾಖಲೆ ಮಾಡಿತ್ತು. ಕ್ರಿಸ್ ಹೆಮ್ಸ್ವರ್ಥ್ ಅಭಿನಯದ ಈ ಚಿತ್ರವು, ನೆಟ್ಫ್ಲಿಕ್ಸ್ನಲ್ಲಿ ಒಂದೇ ದಿನ ಅತೀ ಹೆಚ್ಚು ನೋಡಲಾದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆ ಚಿತ್ರಕ್ಕೆ 99 ಮಿಲಿಯನ್ ವ್ಯೂಸ್ ಸಿಕ್ಕಿತ್ತು. ಈಗ ಅದರ ನಂತರದ ಸ್ಥಾನವನ್ನು 'ದಿಲ್ ಬೇಚಾರ' ಪಡೆದುಕೊಂಡಿದೆ ಎಂಬುದು ಹೆಗ್ಗಳಿಕೆ.