

ಹಿರಿಯ ನಿರ್ದೇಶಕ ರಾಮ್ಗೋಪಾಲ್ ವರ್ಮಾ ಅವರಿಗೆ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳದೇ ಹೋದರೆ, ನಿದ್ದೆ ಬರುವುದಿಲ್ಲ ಎಂದನಿಸುತ್ತದೆ. ಅದೇ ಕಾರಣಕ್ಕೆ, ಅವರು ಒಂದಲ್ಲಾ ಒಂದು ವಿವಾದಗಳಿಂದ ಸುದ್ದಿಯಾಗುತ್ತಲೇ ಇರುತ್ತಾರೆ.
ಇತ್ತೀಚೆಗಷ್ಟೇ ಅವರು, ಟಾಲಿವುಡ್ ನಟ ಪವನ್ ಕಲ್ಯಾಣ್ ಅವರ ಕುರಿತಾಗಿ 'ಪವರ್ ಸ್ಟಾರ್' ಎಂಬ ಚಿತ್ರ ಮಾಡಿ, ತಮ್ಮದೇ ಆರ್ಜಿವಿ ವರ್ಲ್ಡ್ ಥಿಯೇಟರ್ನಲ್ಲಿ ಬಿಡುಗಡೆ ಮಾಡಿದ್ದರು. ಪವನ್ ಕಲ್ಯಾಣ್ ಅವರನ್ನು ಹೋಲುವ ವ್ಯಕ್ತಿಯನ್ನೇ ಕರೆದುಕೊಂಡು ಬಂದು ಸಾಕಷ್ಟು ಸುದ್ದಿ ಮಾಡಿದ್ದರು. ಅಷ್ಟೇ ಅಲ್ಲ, ಈ ಬಗ್ಗೆ ಪವನ್ ಕಲ್ಯಾಣ್ ಅವರ ಅಭಿಮಾನಿಗಳು ಸಿಡಿದ್ದೆದ್ದಿದ್ದೂ ಆಯಿತು. ಆದರೆ, ಚಿತ್ರ ಸುಮಾರು ಎಂದು ಕೇಳಿ ಬಂದ ಹಿನ್ನೆಲೆಯಲ್ಲಿ ಎಲ್ಲವೂ ತಣ್ಣಗಾಯಿತು.
ಹೀಗಿರುವಾಗಲೇ, ವರ್ಮಾ ಅವರು ನಟ ಉದಯಕಿರಣ್ ಅವರ ಕುರಿತು ಚಿತ್ರ ಮಾಡುತ್ತಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಉದಯಕಿರಣ್ ಗೊತ್ತಲ್ಲಾ? ತೆಲುಗು ಚಿತ್ರರಂಗದಲ್ಲಿ ಕೆಲವು ವರ್ಷಗಳ ಹಿಂದೆ ಭರವಸೆಯ ನಟನಾಗಿ ಗುರುತಿಸಿಕೊಂಡಿದ್ದವರು. ಒಂದಿಷ್ಟು ಹೆಸರು ಸಹ ಮಾಡಿದ್ದರು.
'ಮೆಗಾಸ್ಟಾರ್' ಚಿರಂಜೀವಿ ಅವರ ಮಗಳನ್ನು ಮದುವೆಯಾಗುವುದಕ್ಕೆ ಮುಂದಾಗಿದ್ದ ಅವರು, ಒಂದು ಹಂತದಲ್ಲಿ ಮದುವೆಯಾಗಲಿಲ್ಲ. ಈ ಬಗ್ಗೆ ಸಾಕಷ್ಟು ಸುದ್ದಿಯಾಯಿತು. ಆ ನಂತರ ಉದಯಕಿರಣ್ ಮಾಡಿದ ಚಿತ್ರಗಳೆಲ್ಲಾ ಸೋತು ಹೋದವು. ಹತಾಶೆ, ಸೋಲು, ನೋವಿನಿಂದ ಉದಯಕಿರಣ್ ಆತ್ಮಹತ್ಯೆ ಮಾಡಿಕೊಂಡು ಇನ್ನಿಲ್ಲವಾದರು.
ಇದನ್ನೂ ಓದಿ: ಅಳು ತಡೆಯೋಕೆ ಆಗ್ತಿಲ್ಲವಂತೆ ‘ಬಿಗ್ ಬಿ’ಗೆ …
ಈಗ ಉದಯಕಿರಣ್ ಅವರ ಜೀವನವನ್ನಾಧರಿಸಿ ರಾಮ್ಗೋಪಾಲ್ ವರ್ಮಾ ಅವರು ಒಂದು ಚಿತ್ರ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ, ಈಗಾಗಲೇ 'ಹೃದಯ ಕಿರಣ್' ಎಂಬ ಹೆಸರನ್ನೂ ಆ ಚಿತ್ರಕ್ಕೆ ಇಟ್ಟಿದ್ದಾರಂತೆ. ತೆರೆಮರೆಯಲ್ಲಿ ಚಿತ್ರದ ಕೆಲಸಗಳು ಶುರುವಾಗಿದ್ದು, ಸದ್ಯದಲ್ಲೇ ಈ ವಿಷಯವಾಗಿ ಅಧಿಕೃತ ಘೋಷಣೆಯನ್ನು ವರ್ಮಾ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಬರೀ ಉದಯಕಿರಣ್ ಅಷ್ಟೇ ಅಲ್ಲ, ನಟ-ನಿರ್ದೇಶಕ ನಂದಮೂರಿ ಬಾಲಕೃಷ್ಣ ಅವರ ಜೀವನದಲ್ಲಾದ ಘಟನೆಯನ್ನೂ ವರ್ಮಾ ಚಿತ್ರ ಮಾಡುತ್ತಿರುವ ಸುದ್ದಿ ಇದೆ. ಕೆಲವು ವರ್ಷಗಳ ಹಿಂದೆ, ಬಾಲಕೃಷ್ಣ ಅವರು ನಿರ್ಮಾಪಕರಿಗೆ ಶೂಟ್ ಮಾಡಿದ್ದರು. ಈ ಘಟನೆ ಸಾಕಷ್ಟು ಸುದ್ದಿ ಮಾಡಿತ್ತು. ಇದೇ ವಿಷಯವನ್ನಿಟ್ಟುಕೊಂಡು, ಅವರು 'ಆ ರಾತ್ರಿ ಏಮ್ ಜರಗಿಂದಿ' (ಆ ರಾತ್ರಿ ಏನಾಯಿತು) ಎಂಬ ಚಿತ್ರ ಮಾಡುವುದಕ್ಕೆ ಹೊರಟಿದ್ದಾರೆ ಎಂದು ಹೇಳಲಾಗುತ್ತಿದೆ.
ಒಟ್ಟಿನಲ್ಲಿ, ವರ್ಮಾ ಒಂದರಹಿಂದೊಂದು ಚಿತ್ರ ಮಾಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಬರೆದು, ಇನ್ನೂ ಕೆಲವು ದಿನಗಳಲ್ಲಿ ಚಿತ್ರೀಕರಣ ಮಾಡಿ, ಬಿಡುಗಡೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಈ ತರಹದ ಚಿತ್ರಗಳಿಂದ ಟಾಲಿವುಡ್ನಲ್ಲಿ ವಿವಾದಾತ್ಮಕ ವ್ಯಕ್ತಿ ಎನಿಸಿಕೊಂಡಿದ್ದಾರೆ.