ನಾನು ಡ್ರಾಮಾ ಮಾಡ್ತಿಲ್ಲ ಎಂದು ಆಸ್ಪತ್ರೆಯಿಂದಲೇ ವಿಡಿಯೋ ಪೋಸ್ಟ್ ಮಾಡಿದ ನಟಿ ವಿಜಯಲಕ್ಷ್ಮೀ

Vijayalskshmi
Published on

ಕನ್ನಡ-ತಮಿಳು ಸಿನಿಮಾಗಳಲ್ಲಿ ಮಿಂಚಿದ್ದ ನಟಿ ವಿಜಯಲಕ್ಷ್ಮೀ ಎರಡು ದಿನಗಳ ಹಿಂದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಅಸ್ವಸ್ಥರಾದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದೀಗ ವಿಜಯಲಕ್ಷ್ಮೀ ಆರೋಗ್ಯ ಚೇತರಿಕೆಯಾಗಿದ್ದು ಆಸ್ಪತ್ರೆಯಿಂದ ಮತ್ತೊಂದು ವಿಡಿಯೋ ಮಾಡಿ ಫೇಸ್​ಬುಕ್​​ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

ನಾನೀಗ ಆರೋಗ್ಯವಾಗಿದ್ದೇನೆ. ನಿಮ್ಮೆಲ್ಲರ ಪ್ರೀತಿ ನನ್ನನ್ನು ಉಳಿಸಿದೆ. ಆದರೆ ನಾನು ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದನ್ನು ಅನೇಕರು ರಾಜಕೀಯಗೊಳಿಸುತ್ತಿದ್ದಾರೆ. ಸೀಮನ್​​ನಂತಹ ಜನರು ನನ್ನ ಸಾಯುವ ಪ್ರಯತ್ನವನ್ನು ಮತ್ತಷ್ಟು ಆಡಿಕೊಂಡರು. ನಾನು ಸಾಯಲು ನಿಜಕ್ಕೂ ಗಂಭೀರವಾಗಿ ನಿರ್ಧರಿಸಿದ್ದೆ. ನಾನು ಯಾವುದೋ ಒಂದು ನಿರ್ಧಿಷ್ಟ ಪಕ್ಷದ ದಾಳ ಎಂದು ಹೇಳುವುದನ್ನು ದಯವಿಟ್ಟು ನಿಲ್ಲಿಸಿ. ಮನುಷ್ಯರಂತೆ ವರ್ತಿಸಿ. ನಾನು ಸಾವಿನ ವಿಚಾರದಲ್ಲಿ ನಾಟಕ ಮಾಡುತ್ತಿಲ್ಲ. ಏನೂ ಆಹಾರ ಸೇವಿಸಲು ಸಾಧ್ಯವಾಗುತ್ತಿಲ್ಲ. ತಿಂದಿದ್ದೆಲ್ಲ ವಾಂತಿಯಾಗುತ್ತಿದೆ. ರಕ್ತದೊತ್ತಡ, ಹೃದಯ ಬಡಿತದಲ್ಲಿ ಕೂಡ ಬದಲಾವಣೆಯಾಗುತ್ತಿದೆ. ನಾನು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದೇನೆ. ಯಾರದ್ದೋ ಅಣತಿ ಮೇರೆಗೆ ಇದನ್ನೆಲ್ಲ ಮಾಡುತ್ತಿಲ್ಲ. ನನ್ನ ಸಾವನ್ನು ರಾಜಕೀಯಗೊಳಿಸಿದ್ದಲ್ಲದೆ, ಬಾಯಿಗೆ ಬಂದಂತೆ ಮಾತನಾಡುತ್ತಿರುವವರ ಬಗ್ಗೆ ನನಗೆ ತುಂಬ ಬೇಸರವಿದೆ.

ನಾನು ಸೀಮನ್​​ನಿಂದಾಗಿ ತುಂಬ ಸಂಕಷ್ಟ ಅನುಭವಿಸಿದ್ದೇನೆ. ಅವನು ಮನುಷ್ಯನೋ...ಮೃಗವೋ ಎಂಬುದೇ ಅರ್ಥವಾಗುತ್ತಿಲ್ಲ. ಆದರೆ ಇದನ್ನು ರಾಜಕೀಯವಾದ ದೃಷ್ಟಿಕೋನದಲ್ಲಿ ನೋಡಬೇಡಿ. ಕೆಟ್ಟದಾಗಿ ಬರೆಯಬೇಡಿ. ನಾನು ಕೀಳು ಮಟ್ಟದ ವ್ಯಕ್ತಿಯಲ್ಲ. ಜೀವನದಲ್ಲಿ ತುಂಬ ಅನುಭವಿಸಿದ್ದೇನೆ..ಹೋರಾಡಿದ್ದೇನೆ. ನಾನು ಎಲ್ಲರನ್ನೂ ಪ್ರೀತಿಸುತ್ತೇನೆ. ನೀವು ನನ್ನ ಬಗ್ಗೆ ಕೆಟ್ಟದ್ದನ್ನು ಬರೆಯಬೇಡಿ. ಆದಷ್ಟು ಬೇಗ ಸಂಪೂರ್ಣವಾಗಿ ಗುಣಮುಖಳಾಗುತ್ತೇನೆ. ಪ್ರತಿಯೊಬ್ಬರಿಗೂ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರಲಿ ಎಂದು ವಿಜಯಲಕ್ಷ್ಮೀ ಹೇಳಿದ್ದಾರೆ. ಇದನ್ನೂ ಓದಿ: ವಿಜಯಲಕ್ಷ್ಮೀ ಆತ್ಮಹತ್ಯೆಗೆ ಯತ್ನ; ವಿಡಿಯೋ ಪೋಸ್ಟ್ ಮಾಡಿ, ನನ್ನ ಸಾವಿಗೆ ಆ ಇಬ್ಬರು ವ್ಯಕ್ತಿಗಳೇ ಕಾರಣವೆಂದ ನಟಿ

ಭಾನುವಾರ ರಾತ್ರಿ ವಿಜಯಲಕ್ಷ್ಮೀ ಆತ್ಮಹತ್ಯೆಗೆ ಯತ್ನಿಸಿದ್ದರು. ತನ್ನ ಸಾವಿಗೆ ಮಾಜಿ ನಟ, ಎನ್​ಟಿಕೆ ಪಕ್ಷದ ಮುಖಂಡ ಸೀಮನ್​ ಮತ್ತು ಹರಿ ನಾಡಾರ್​ ನೇರ ಕಾರಣ. ನಾನು ಸತ್ತರೆ ಅವರನ್ನು ಜೈಲಿಗೆ ಹಾಕಿ. ಯಾರೂ ಜಾಮೀನು ಕೊಡಬೇಡಿ ಎಂದು ಅಂದು ಮಾಡಿದ ವಿಡಿಯೋದಲ್ಲಿ ಹೇಳಿದ್ದರು.

ನಾನೊಬ್ಬಳು ವೇಶ್ಯೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಿಬಿಟ್ಟಿದ್ದಾರೆ. ಇಂಥ ಅವಮಾನ ಸಹಿಸಿ ಬದುಕಲು ಸಾಧ್ಯವೇ ಇಲ್ಲ ಎಂದಿದ್ದರು. ಅಸ್ವಸ್ಥಗೊಂಡ ಅವರನ್ನು ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. (ಏಜೆನ್ಸಿಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net