ಅಷ್ಟು ದೊಡ್ಡ ವ್ಯಕ್ತಿ ಅಂತಾ ಗೊತ್ತಿರಲಿಲ್ಲ; ಬಿಲ್​ಗೇಟ್ಸ್​ ಭೇಟಿ ಕುರಿತು ಚಾಯ್​ವಾಲಾ ಹೇಳಿದ ಮಾತಿದು

Dolly Chaiwala
Published on

ನಾಗ್ಪುರ: ಭಾರತದ ಪ್ರವಾಸದಲ್ಲಿರುವ ಮೈಕ್ರೋಸಾಫ್ಟ್​ ಸಹ ಸಂಸ್ಥಾಪಕ ಬಿಲ್​ಗೇಟ್ಸ್​ ನಾಗ್ಪುರದಲ್ಲಿ ಪ್ರಖ್ಯಾತಿ ಪಡೆದಿರುವ ಡಾಲಿ ಚಾಯ್​ವಾಲಾ ಮಾಡಿರುವ ಟೀ ಸವಿದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಸುನೀಲ್​ ಪಾಟೀಲ್​ (ಡಾಲಿ ಚಾಯ್​ವಾಲಾ)ಗೆ ಬಿಲ್​ಗೇಟ್ಸ್​ ಗುರುತು ಸಿಕ್ಕಿರಲಿಲ್ಲವಂತೆ.

ಡಾಲಿ ಚಾಯ್​ವಾಲಾ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಆತನ ಮುಗ್ದತೆಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಈ ರೀತಿಯ ಮುಗ್ದ ಮನಸ್ಸಿನ ಜನ ನಮ್ಮ ನಡುವೆ ಇರುವುದು ಅಪರೂಪ ಎಂದು ಕಮೆಂಟ್​ ಮಾಡಿದ್ದಾರೆ.

ನನಗೆ ಅವರು ಬಿಲ್ ಗೇಟ್ಸ್, ಅಷ್ಟು ದೊಡ್ಡ ವ್ಯಕ್ತಿ ಎಂದು ಗೊತ್ತಿರಲಿಲ್ಲ, ಯಾರೋ ಫಾರಿನರ್​ ಎಂದು ಭಾವಿಸಿ ಎಲ್ಲಾ ಗ್ರಾಹಕರಿಗೆ ನೀಡುವಂತೆ ಅವರಿಗೆ ಸಹ ಚಹಾ ಕೊಟ್ಟೆ. ಮರುದಿನ, ಕೆಲಸಕ್ಕೆ ಬಂದಾಗಲೇ ನನಗೆ ಗೊತ್ತಾಗಿದ್ದು ಅವರು ಬಿಲ್ ಗೇಟ್ಸ್, ಅಷ್ಟು ದೊಡ್ಡ ವ್ಯಕ್ತಿ ಎಂದು ತಿಳಿದುಕೊಂಡೆ. ಚಹಾ ಕುಡಿಯಲು ಅವರು ನನ್ನ ಬಳಿ ಬಂದಿದ್ದಾಗ ಅವರ ಬಳಿ ನಾವು ಸ್ವಲ್ಪವೂ ಮಾತನಾಡಿರಲಿಲ್ಲ. ಅವರು ನನ್ನ ಪಕ್ಕದಲ್ಲಿ ನಿಂತಿದ್ದರು, ನಾನು ನನ್ನ ಕೆಲಸದಲ್ಲಿ ನಿರತನಾಗಿದ್ದೆ. ನನ್ನ ಚಹಾವನ್ನು ಕುಡಿದ ನಂತರ ಅವರು "ವಾವ್, ಡಾಲಿ ಕಿ ಚಾಯ್" ಎಂದು ಪ್ರಶಂಸಿದರು. ಇಂದು ನಾನು ನಾಗ್ಪುರದ ಡಾಲಿ ಚಾಯ್​ವಾಲಾ ಆಗಿದ್ದೇನೆ. ಮುಂದೊಂದು ದಿನ ಪ್ರಧಾನಿ ಮೋದಿಯವರಿಗೆ ಚಹಾ ನೀಡುವ ಆಸೆಯಿದೆ ಎಂದು ಹೇಳಿದ್ದಾರೆ.

ರಸ್ತೆ ಬದಿಯ ಕೈ ಗಾಡಿಯಲ್ಲಿ ತಮ್ಮದೇ ಆದ ವಿಶೇಷ ರೀತಿಯಲ್ಲಿ ಚಹಾ ತಯಾರಿಸುವ ಹಾಗೂ ಅದನ್ನು ವಿತರಿಸುವ ಸ್ಟೈಲ್ ಗಳ ಮೂಲಕವೇ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿರುವ ಡಾಲಿ ಚಾಯ್​​ವಾಲಾ ತಮ್ಮ ವಿಶೇಷ ರೀತಿಯ ಚಹಾ ತಯಾರಿಕೆ ಹಾಗೂ ವಿತರಣೆಯ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದ ಮೂಲಕ ಎಲ್ಲರಿಗೂ ತಲುಪಿಸುವ ಮೂಲಕ ಅವರು ಲಕ್ಷಾಂತರ ಜನರಿಗೆ ಚಿರಪರಿಚಿತರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net