ಪದಾರ್ಪಣೆ ಪಂದ್ಯದಲ್ಲೇ ಭರ್ಜರಿ​ ಬೌಲಿಂಗ್: ಆಟೋ ಡ್ರೈವರ್​ ಪುತ್ರನಿಗೆ ಬಂಪರ್​ ಗಿಫ್ಟ್​ ಕೊಟ್ಟ ನೀತಾ ಅಂಬಾನಿ! Vignesh Puthur

Vignesh Puthur
Published on

Vignesh Puthur : ರಾಜ್ಯ ಕ್ರಿಕೆಟ್​ ತಂಡದ ಪರ ಒಂದೂ ಪಂದ್ಯ ಆಡುವ ಅವಕಾಶ ಪಡೆಯದ ನಡುವೆಯೂ ಐಪಿಎಲ್​ನಲ್ಲಿ ಅವಕಾಶ ಪಡೆದ ಕೇರಳ ಮೂಲದ 24 ವರ್ಷದ ಎಡಗೈ ರಿಸ್ಟ್​ ಸ್ಪಿನ್ನರ್​ ವಿಘ್ನೇಶ್​ ಪುಥುರ್​, ಮುಂಬೈ ಇಂಡಿಯನ್ಸ್​ ಪರ ಮೊದಲ ಪಂದ್ಯದಲ್ಲೇ 3 ವಿಕೆಟ್​ ಕಬಳಿಸುವ ಮೂಲಕ ವಿಖ್ಯಾತಿ ಗಳಿಸಿದ್ದಾರೆ.

156 ರನ್​ ಗುರಿಯನ್ನು ಸುಲಭವಾಗಿ ತಲುಪುವ ನಿರೀಕ್ಷೆಯಲ್ಲಿದ್ದ ಸಿಎಸ್​ಕೆ ಹಾದಿಗೆ ವಿಘ್ನ ತರುವ ಭೀತಿಯನ್ನು ವಿಘ್ನೇಶ್​ ಹುಟ್ಟಿಸಿದ್ದರು. ಅಲ್ಲದೆ ಪಂದ್ಯದ ಬಳಿಕ ದಿಗ್ಗಜ ಎಂಎಸ್​ ಧೋನಿ ಪ್ರಶಂಸಿಸಿದ ಚಿತ್ರ-ವಿಡಿಯೋ ವೈರಲ್​ ಆಗುವುದರೊಂದಿಗೆ ವಿಘ್ನೇಶ್​ ಕ್ರಿಕೆಟ್​ ಪ್ರೇಮಿಗಳ ಹೃದಯ ಗೆದ್ದಿದ್ದಾರೆ.

ಕೇರಳದ ಮಲಪ್ಪುರಂನ ಆಟೋ ಚಾಲಕ ಸುನೀಲ್​ ಕುಮಾರ್​ ಮತ್ತು ಗೃಹಿಣಿ ಬಿಂದು ದಂಪತಿಯ ಪುತ್ರನಾಗಿರುವ ವಿಘ್ನೇಶ್​, ಕ್ಯಾಲಿಕಟ್​ ವಿಶ್ವವಿದ್ಯಾಲಯದ ಎಂಎ (ಇಂಗ್ಲಿಷ್​ ಸಾಹಿತ್ಯ) ವಿದ್ಯಾರ್ಥಿಯಾಗಿದ್ದಾರೆ. ಪ್ರಥಮ ದರ್ಜೆ ಪಂದ್ಯವನ್ನು ಆಡಿರದ ವಿಘ್ನೇಶ್​, ಕೇರಳ ಕ್ರಿಕೆಟ್​ ಲೀಗ್​ ಮತ್ತು ತಮಿಳುನಾಡು ಪ್ರೀಮಿಯರ್​ ಲೀಗ್​ನಂಥ ರಾಜ್ಯಮಟ್ಟದ ಟಿ20 ಟೂರ್ನಿಗಳಲ್ಲಿ ಆಡಿದ ಅನುಭವವನ್ನಷ್ಟೇ ಹೊಂದಿದ್ದರು.

ಕಳೆದ ಮೆಗಾ ಹರಾಜಿನಲ್ಲಿ ಮುಂಬೈ ತಂಡ ಮೂಲಬೆಲೆ 30 ಲಕ್ಷ ರೂ.ಗೆ ವಿಘ್ನೇಶ್​ರನ್ನು ಖರೀದಿಸಿದ ಬಳಿಕ ದಕ್ಷಿಣ ಆಫ್ರಿಕಾದ ಎಸ್​ಎ20 ಲೀಗ್​ ವೇಳೆ ಎಂಐ ಕೇಪ್​ಟೌನ್​ ನಾಯಕ ಹಾಗೂ ಸ್ಪಿನ್​ ಮಾಂತ್ರಿಕ ರಶೀದ್​ ಖಾನ್​ ಜತೆ ನೆಟ್ಸ್​ನಲ್ಲಿ ಬೌಲಿಂಗ್​ ಮಾಡುವ ಮತ್ತು ಟಿಪ್ಸ್​ ಪಡೆಯುವ ಅವಕಾಶ ಕಲ್ಪಿಸಲಾಗಿತ್ತು. ಅಲ್ಲದೆ ನೆಟ್ಸ್​ನಲ್ಲಿ ರೋಹಿತ್​, ಸೂರ್ಯಕುಮಾರ್​, ತಿಲಕ್​ ವರ್ಮರಂಥ ಬ್ಯಾಟರ್​ಗಳು ವಿಘ್ನೇಶ್​ ಎಸೆತಗಳನ್ನು ಎದುರಿಸಲು ಕಷ್ಟಪಟ್ಟಿದ್ದರಿಂದ ಮುಂಬೈ ಮೊದಲ ಪಂದ್ಯದಲ್ಲೇ ಆಡಿಸುವ ಸಾಹಸಕ್ಕೆ ಕೈಹಾಕಿ ಐಪಿಎಲ್​ಗೆ ಹೊಸ ಪ್ರತಿಭೆಯೊಂದನ್ನು ಪರಿಚಯಿಸಿದೆ.

ಮುಂಬೈ ಇಂಡಿಯನ್ಸ್ ತಂಡದ ಡ್ರಸ್ಸಿಂಗ್​ ಕೋಣೆಯಲ್ಲಿ, ವಿಘ್ನೇಶ್ ಅವರನ್ನು ಅವರ ತಂಡದ ಸದಸ್ಯರು ಕೊಂಡಾಡಿದ್ದಾರೆ. ತಂಡದ ಮಾಲಕಿ ನೀತಾ ಅಂಬಾನಿ ಕೂಡ ವಿಘ್ನೇಶ್ ಅವರಿಗೆ ವಿಶೇಷ ಗೌರವ ಸಲ್ಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೀತಾ ಅಂಬಾನಿ ಮುಂಬೈ ಆಟಗಾರರ ನಡುವೆಯಿಂದ ವಿಘ್ನೇಶ್ ಅವರನ್ನು ಕರೆದು ಅವರಿಗೆ ವಿಶೇಷ ಗೌರವ ಸಲ್ಲಿಸಿದ್ದಾರೆ.

ವಿಘ್ನೇಶ್ ಎಲ್ಲಿದ್ದಾರೆ ಎಂದು ಕೇಳಿ, ಹತ್ತಿರ ಕರೆದ ನಂತರ ನೀತಾ ಅಂಬಾನಿ ಆಟಗಾರನ ಜೆರ್ಸಿಯ ಮೇಲೆ ವಿಶೇಷ ಪಿನ್ ಅನ್ನು ಅಂಟಿಸಿದರು. ಆ ಪಿನ್​ ಮುಂಬೈ ತಂಡದ ಪಂದ್ಯದ ಅತ್ಯುತ್ತಮ ಬೌಲರ್‌ಗೆ ಪ್ರಶಸ್ತಿಯಾಗಿತ್ತು. ಬಳಿಕ ಮಾತನಾಡಿದ ವಿಘ್ನೇಶ್​, ಆಡಲು ಅವಕಾಶ ನೀಡಿದ್ದಕ್ಕಾಗಿ ಮುಂಬೈ ತಂಡಕ್ಕೆ ಧನ್ಯವಾದ ಅರ್ಪಿಸಿದರು. ಪಂದ್ಯದುದ್ದಕ್ಕೂ ತಮ್ಮ ಮೇಲೆ ಒತ್ತಡ ಹೇರದಿದ್ದಕ್ಕಾಗಿ ಸೂರ್ಯಕುಮಾರ್ ಯಾದವ್ ಅವರಿಗೆ ವಿಘ್ನೇಶ್ ಧನ್ಯವಾದ ಅರ್ಪಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net