ಆನೇಕಲ್: ಸೂರ್ಯನಗರದ ಇಗ್ಗಲೂರಿನ ಮನೆ ಮೇಲಿನ ಟ್ಯಾಂಕ್ನಲ್ಲಿ ಸೋಮವಾರ 45 ದಿನದ ಹೆಣ್ಣು ಶಿಶುವಿನ ಶವ ಪತ್ತೆಯಾದ ಪ್ರಕರಣ ತಿರುವು ಪಡೆದುಕೊಂಡಿದೆ. ಔಷಧ ಕುಡಿಸಿದ ಕೆಲವೇ ನಿಮಿಷಗಳಲ್ಲಿ ಶಿಶು ಮಡಿಲಲ್ಲೇ ಕೊನೆಯುಸಿರೆಳೆಯಿತು, ಬಳಿಕ ಹೆದರಿ ನಾನೇ ಮನೆಯ ಮೇಲಿನ ನೀರಿನ ಟ್ಯಾಂಕ್ನಲ್ಲಿ ಹಾಕಿದೆ ಎಂದು ಪೊಲೀಸರ ಎದುರು ತಾಯಿ ಅರ್ಚಿತಾ (26) ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಆಧಾರ್ ಕಾರ್ಡ್ ಬಳಕೆದಾರರೇ ಇದೇ ನಿಮಗೆ ಲಾಸ್ಟ್ ಡೇಟ್! ತಪ್ಪಿದರೆ ಮತ್ತೆ ಅವಕಾಶ ಸಿಗೋದು ಡೌಟ್
ಏನಿದು ಪ್ರಕರಣ?
ತೊಟ್ಟಿಲಲ್ಲಿ ಮಲಗಿದ್ದ ಅರ್ಚಿತಾ ಅವರ ಮಗು ಇದ್ದಕ್ಕಿದ್ದಂತೆ ನಾಪತ್ತೆಯಾಗಿತ್ತು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ ವೇಳೆ ಮನೆಯ ಮೇಲಿದ್ದ ನೀರಿನ ಟ್ಯಾಂಕ್ನಲ್ಲಿ ಮಗುವಿನ ಶವ ಪತ್ತೆಯಾಗಿತ್ತು. ಒಂದೂವರೆ ವರ್ಷದ ಹಿಂದೆ ಅರ್ಚಿತಾ ಹಾಗೂ ಮನು ಅಂತರ್ಜಾತಿ ವಿವಾಹವಾಗಿದ್ದರು, ದಾಂಪತ್ಯಕ್ಕೆ ಸಾಕ್ಷಿಯಾಗಿ ಹೆಣ್ಣು ಮಗು ಜನಿಸಿತ್ತು. ಆದರೆ 7 ತಿಂಗಳಿಗೆ ಮಗು ಜನಿಸಿದ್ದರಿಂದ ಮಗುವಿನ ಆರೋಗ್ಯ ಸ್ಥಿರವಾಗಿರಲಿಲ್ಲ, ಮಗುವಿನ ಚಿಕಿತ್ಸೆಗಾಗಿ ಅರ್ಚಿತಾ ಕುಟುಂಬದವರು ಲಕ್ಷಾಂತರ ರೂ.ಖರ್ಚು ಮಾಡಿದ್ದರು.
ತಂದೆ ಮನೆಯಲ್ಲಿಯೇ ಮಗುವಿನೊಂದಿಗೆ ಅರ್ಚಿತಾ ಇದ್ದರು. ಉಸಿರಾಟದ ತೊಂದರೆ ಎದುರಿಸುತ್ತಿದ್ದ ಮಗುವಿಗೆ ನ.4ರಂದು ಎಂದಿನಂತೆ ಅರ್ಚಿತಾ ಔಷಧ ಕುಡಿಸಿದ್ದರು. ಆದರೆ ಕೆಲವೇ ನಿಮಿಷದಲ್ಲಿ ಮಗು ಸಾವನ್ನಪ್ಪಿತ್ತು. ಇದರಿಂದ ಪತಿ ಹಾಗೂ ಇನ್ನಿತರರಿಂದ ದೂಷಣೆ ಕೇಳಬೇಕಾಗುತ್ತದೆ ಎಂದು ಹೆದರಿ ಮಗುವಿನ ಶವವನ್ನು ನೀರಿನ ಟ್ಯಾಂಕ್ಗೆ ಹಾಕಿ, ಮಗು ನಾಪತ್ತೆಯಾಗಿದೆ ಎಂದು ತಿಳಿಸಿದ್ದೆ ಎಂದು ಪೊಲೀಸರ ತನಿಖೆಯಲ್ಲಿ ಹೇಳಿಕೆ ನೀಡಿದ್ದಾಳೆ.
ಕುಟುಂಬದವರ ತನಿಖೆ
ಇದ್ದಕ್ಕಿದ್ದಂತೆ ಹಸುಗೂಸು ನಾಪತ್ತೆಯಾಗಿದೆ ಎಂಬ ಬಗ್ಗೆ ಕುತೂಹಲಗೊಂಡ ಸೂರ್ಯನಗರ ಠಾಣೆ ಇನ್ಸ್ಪೆಕ್ಟರ್ ಸಂಜು ಮಹಾಜನ್ ಹಾಗೂ ಪೊಲೀಸರು ಕುಟುಂಬದವರ ತನಿಖೆ ನಡೆಸಿದ್ದರು. ಮನೆಯಲ್ಲಿ ಅಜ್ಜಿ ಹಾಗೂ ತಾಯಿ ಇದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದ ಹಿನ್ನೆಲೆಯಲ್ಲಿ ಅಜ್ಜಿಯನ್ನು ತನಿಖೆ ಮಾಡಿ ನಂತರದಲ್ಲಿ ಅರ್ಚಿತಾಳ ಮೇಲೆಯೇ ಅನುಮಾನ ಮೂಡಿತ್ತು. ಅರ್ಚಿತಾಳ ತೀವ್ರ ವಿಚಾರಣೆಯಲ್ಲಿ ಪ್ರಕರಣದ ಸತ್ಯ ಹೊರಬಂದಿದೆ. ಆರಂಭದಲ್ಲಿ ಏನು ಗೊತ್ತಿಲ್ಲ ಎಂಬಂತೆ ನಟಿಸಿದ್ದ ಅರ್ಚಿತಾ ಕಡೆಗೆ ದುಃಖ ತಡೆಯಲಾರದೆ ಅಳುತ್ತಲೇ ಸತ್ಯಾಂಶ ಬಾಯ್ಬಿಟ್ಟಿದ್ದಾಳೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಮನೆಯವರನ್ನು ತನಿಖೆಗೆ ಒಳಪಡಿಸಲಾಗಿದೆ. ಮಗುವಿಗೆ ಔಷಧ ಕೊಟ್ಟಾಗ ಮೃತಪಟ್ಟಿತ್ತು, ಬಳಿಕ ನಾನೇ ಭಯಪಟ್ಟು ನೀರಿನ ಟ್ಯಾಂಕ್ನಲ್ಲಿ ಹಾಕಿದ್ದೇನೆ ಎಂದು ತಾಯಿ ಹೇಳಿಕೆ ನೀಡಿದ್ದಾಳೆ. ಆದರೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕ ಸತ್ಯಾಂಶ ಹೊರಬೀಳಲಿದೆ.
| ಸಿ.ಕೆ.ಬಾಬ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಆಧಾರ್ ಕಾರ್ಡ್ ಬಳಕೆದಾರರೇ ಇದೇ ನಿಮಗೆ ಲಾಸ್ಟ್ ಡೇಟ್! ತಪ್ಪಿದರೆ ಮತ್ತೆ ಅವಕಾಶ ಸಿಗೋದು ಡೌಟ್