ಕರೊನಾ ವಾರಿಯರ್​ ಅಂತ ಸುಳ್ಳು ಹೇಳಿ ಲಸಿಕೆ ಪಡೆದರಾ ಮೀರಾ ಚೋಪ್ರಾ?

Meera Chopra - Final
Published on

ಮುಂಬೈ: ದರ್ಶನ್​ ಅಭಿನಯದ 'ಅರ್ಜುನ್​' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಮೀರಾ ಚೋಪ್ರಾ ನೆನಪಿದೆಯಾ? ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಅವರ ಕಸಿನ್​ ಆಗಿರುವ ಮೀರಾ, 'ಅರ್ಜುನ್​' ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಬಂದರು. ಅದೊಂದು ಚಿತ್ರದಲ್ಲಿ ನಟಿಸಿದ ಮೇಲೆ, ಅದೆಲ್ಲಿಗೆ ಹೋದರೋ ಗೊತ್ತಿಲ್ಲ.

ಈಗ ಅವರು ಬಹಳ ದಿನಗಳ ನಂತರ ಸುದ್ದಿಯಲ್ಲಿದ್ದಾರೆ. ಕರೊನಾ ವಾರಿಯರ್​ ಎಂದು ಮೀರಾ ಚೋಪ್ರಾ ಸುಳ್ಳು ಹೇಳಿ ಲಸಿಕೆಯನ್ನು ಪಡೆದಿದ್ದಾರೆ ಎಂಬ ಆರೋಪವೊಂದು ಅವರ ಮೇಲೆ ಕೇಳಿಬಂದಿದ್ದು, ಈ ಆರೋಪವನ್ನು ಇದೀಗ ಮೀನಾ ಅಲ್ಲಗೆಳೆದಿದ್ದಾರೆ.

ಇತ್ತೀಚೆಗಷ್ಟೇ ಮೀರಾ ಲಸಿಕೆ ಪಡೆದಿದ್ದು, ಲಸಿಕೆ ಹಾಕಿಸಿಕೊಳ್ಳುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ತಕ್ಷಣವೇ ಭಾರತೀಯ ಜನತಾ ಪಕ್ಷದ ಥಾಣೆ ವಿಭಾಗದ ಅಧ್ಯಕ್ಷ ಮತ್ತು ಎಂ.ಎಲ್​.ಸಿ ನಿರಂಜನ್​ ದಾವ್ಕರೆ ಎನ್ನುವವರು, ಲಸಿಕೆ ಪಡೆಯುವ ಸಂದರ್ಭದಲ್ಲಿ ಮೀರಾ ಅವರ ಐಡೆಂಟಿಟಿ ಕಾರ್ಡ್​ನ ಫೋಟೋ ತೆಗೆದು ಹಾಕಿದ್ದರು. ಅದರಲ್ಲಿ ಓಂ ಸಾಯಿ ಆರೋಗ್ಯ ಕೇರ್​ ಪ್ರೈವೇಟ್​ ಲಿಮಿಟೆಡ್​ನಲ್ಲಿ ಕೆಲಸ ಮಾಡುತ್ತಿರುವ ಫ್ರಂಟ್​ಲೈನ್​ ವರ್ಕರ್​ ಆಗಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡು ಲಸಿಕೆ ಪಡೆದಿದ್ದಾರೆ ಎಂದು ನಿರಂಜನ್​ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಮೀರಾ ನಿಜಕ್ಕೂ ಫ್ರಂಟ್​ಲೈನ್​ ವರ್ಕರ್​ ಆಗಿ ಕೆಲಸ ಮಾಡುತ್ತಿದ್ದಾರಾ ಅಥವಾ ಸುಳ್ಳು ಐಡಿ ತೋರಿಸಿ ಲಸಿಕೆ ಪಡೆದಿದ್ದಾರಾ ಎಂಬ ಕುರಿತು ವಿಚಾರಣೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

ಇದೀಗ ಪ್ರತಿಕ್ರಿಯೆ ನೀಡಿರುವ ಮೀರಾ, 'ನಾನು ಒಂದು ತಿಂಗಳ ಸತತ ಪ್ರಯತ್ನದ ನಂತರ ನೋಂದಾಯಿಸಿ ಲಸಿಕೆ ಪಡೆದಿದ್ದೀನಿ. ನೋಂದಣಿಗಾಗಿ ಆಧಾರ್ ಕಾರ್ಡ್​ ಮಾತ್ರ ನೀಡಿದ್ದೇನೆಯೇ ಹೊರತು, ಯಾವುದೇ ಐಡಿಯನ್ನೂ ನೀಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಐಡಿ ನನ್ನದಲ್ಲ ಮತ್ತು ಅದರ ಬಗ್ಗೆ ನನಗೆ ಏನೂ ಗೊತ್ತಿಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net