

ಅವರು ಬರೆದ ಈ ಪುಸ್ತಕವನ್ನುಕುತೂಹಲದಿಂದ ಓದುತ್ತಾ ಇದ್ದೆ. ಇದರಲ್ಲಿ ನನಗೆ ಆಕರ್ಷಣೀಯವಾಗಿ ಕಂಡದ್ದು, ಮಹಾರಾಜರು ಎಷ್ಟು ಸರಳವಾಗಿದ್ದರು; ಅಹಂಕಾರರಹಿತರಾಗಿ ಶ್ರೀಸಾಮಾನ್ಯನಂತೆ ಇರಲು ಬಯಸುತ್ತಿದ್ದರು ಎಂಬುದು. ಒಂದು ಕಡೆ-ಸರಳ ಸಜ್ಜನಿಕೆಯ ಸಾಕಾರ ಮೂರ್ತಿ, ಕೊಡುಗೈದಾನಿ ಎಂದು ಕರೆದಿದ್ದಾರೆ. ಅದರಲ್ಲಿ ಶಾಲಾ ದಿನಗಳಲ್ಲಿ ಒಂದು ದಿನ ಶ್ರೀ ಜಯಚಾಮರಾಜ ಒಡೆಯರು ತಮ್ಮ ಗುರುಗಳ ಬಳಿ ಹೋಗಿ ಬಡತನ ಮತ್ತು ಬಡವರು ಹೇಗಿರುತ್ತಾರೆ ಎಂದು ತಿಳಿಯುವ ಇಚ್ಛೆ ವ್ಯಕ್ತಪಡಿಸಿದರು. ಅರಮನೆ ಊಳಿಗದವರಿಗೆ ಅಂದರೆ ಕೆಲಸದವರು ಮತ್ತು ತಮ್ಮ ನಡುವೆ ಭೇದ ಮಾಡಲು ಅವರು ಬಿಡುತ್ತಿರಲಿಲ್ಲವಂತೆ. ಗುರುಗಳೊಂದಿಗೆ ಬಡವಿದ್ಯಾರ್ಥಿಗಳ ಬಳಿ ಹೋಗುತ್ತಿದ್ದರಂತೆ. ಅವರ ಸ್ಥಿತಿಗತಿ ಕಂಡು ಮನಸ್ಸು ಮರುಗುತ್ತಿತ್ತು. ಈ ಹಿನ್ನೆಲೆಯಲ್ಲಿ ಮಹಾರಾಜರಾದ ಮೇಲೆ ಅವರು ರೈತರು ಸೇರಿದಂತೆ ಗ್ರಾಮೀಣ ಜನರ ಸುಧಾರಣೆಗಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸಿದರು ಎಂದು ಉಲ್ಲೇಖಿಸಿದ್ದಾರೆ.
ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಅವರು ಪ್ರವಾಸ ಕೈಗೊಂಡಿದ್ದರು. ಆ ಸಂದರ್ಭದಲ್ಲಿ ಅವರು ಉಳಿದುಕೊಂಡಿದ್ದ ಹೋಟೆಲ್ನಲ್ಲಿ ಗುಜರಾತ್ ವಾಸಿಯೊಬ್ಬನಿದ್ದ. ಆತನೊಂದಿಗೆ ಆತ್ಮೀಯವಾಗಿ ಮಾತನಾಡುತ್ತಾ ಉಭಯಕುಶಲೋಪರಿ ಮಾತನಾಡುತ್ತಾ ಇದ್ದರು. ಕೊನೆಗೆ ತಾನು ಮಾತನಾಡುತ್ತಿರುವುದು ಮಹಾರಾಜನಲ್ಲಿ ಎಂದು ತಿಳಿದಾಗ ಆಶ್ಚರ್ಯವೂ ಗಾಬರಿಯೂ ಆಗಿತ್ತಂತೆ ಆತನಿಗೆ. ಇಂತಹ ಅನೇಕ ಸಂದರ್ಭಗಳನ್ನು ಲೇಖಕರು ಉಲ್ಲೇಖ ಮಾಡಿದ್ದಾರೆ.
ಇದರಲ್ಲಿ ಪ್ರಮುಖವಾದುದು, ಮಹಾರಾಜರು, ರಾಜ ಪ್ರಮುಖರಾಗಿ (ಮುಖ್ಯಅತಿಥಿಯಾಗಿ) ಬೆಂಗಳೂರಿನ ಲಾಲ್ಬಾಗ್ನಲ್ಲಿರುವ ಗಾಜಿನ ಮನೆಯಲ್ಲಿ ಏರ್ಪಡಿಸಿದ್ದ ನೃತ್ಯಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಬಳಿಕ ನೃತ್ಯಗಾರ್ತಿ ಸುಧಾರಾಣಿ ಅವರು ಮಹಾರಾಜರಲ್ಲಿ ಅಟೋಗ್ರಾಫ್ ಕೇಳಿದರಂತೆ. ಆಗ ಒಡೆಯರ್ ಹೇಳಿದರಂತೆ, ‘ನಾನು ಸಾಧಾರಣ ಮನುಷ್ಯ. ನೀವು ಇಲ್ಲಿರುವ ಇನ್ನಿತರ ಶ್ರೇಷ್ಠ ವ್ಯಕ್ತಿಗಳಿಂದ ಸಹಿ ಪಡೆ ಯಬಾರದೇಕೆ!’ ಎಂದರಂತೆ. ಅಂದರೆ ತಾನೊಬ್ಬ ಸಾಮಾನ್ಯ ವ್ಯಕ್ತಿ ಎಂದು ಗುರುತಿಸಿಕೊಳ್ಳಲು ಇಚ್ಛಿಸುತ್ತಿದ್ದರು ಎಂಬುದಕ್ಕೆ ಇದೊಂದು ನಿದರ್ಶನವಷ್ಟೆ.
ಮಹಾರಾಜರು ಹೃದಯವಂತಿಕೆ ಹಾಗೂ ಔದಾರ್ಯಕ್ಕೆ ಹೆಸರಾದವರು. ಬಾಲ್ಯದಿಂದಲೇ ಈ ಗುಣಗಳು ಅವರಲ್ಲಿ ಮೈಗೂಡಿತ್ತು ಎಂಬುದಕ್ಕೆ ಸಾಕಷ್ಟು ನಿದರ್ಶನಗಳನ್ನು ಹೇಳಲಾಗಿದೆ. ಒಮ್ಮೆ ಗುರುಗಳು ಪಾಠ ಮಾಡುವಾಗ, ‘ನಿಮ್ಮ ಬಳಿ ತುಂಬಾ ಹಣವಿದ್ದರೆ ಏನು ಮಾಡುವಿರಿ’ ಎಂದು ವಿದ್ಯಾರ್ಥಿಗಳಲ್ಲಿ ಕೇಳಿದರಂತೆ. ಆಗ ಒಡೆಯರ್ ಅವರು ತಕ್ಷಣ, ಬಡ ಬಗ್ಗರಿಗೆ ದಾನ ಮಾಡುವೆ ಎಂದರಂತೆ. ಅವರದ್ದು ಕೇವಲ ಮಾತಾಗಿರಲಿಲ್ಲ. ಅವರು ಮಹಾರಾಜರಾದ ಬಳಿಕ ತಮ್ಮ ಸಂಪತ್ತನ್ನು ಜನರು ಸ್ವಾವಲಂಬಿಗಳಾಗಿ ಜೀವನ ನಡೆಸಲು ಸಹಕಾರಿಯಾಗುವ ಅನೇಕ ಕಾರ್ಯಗಳಿಗೆ ಬಳಸಿದರು.
ಹಾಗೆಯೇ ಮಹಾರಾಜ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಕಾರ್ಯಕ್ರಮಗಳಿಗಾಗಿ ವಿದ್ಯಾರ್ಥಿಗಳಿಂದ ಹಣ ಸಂಗ್ರಹ ಮಾಡಲಾಗುತ್ತಿತ್ತು. ಒಟ್ಟು ಸಂಗ್ರಹವಾದ ಹಣ ಹಾಗೂ ಕಾರ್ಯಕ್ರಮಕ್ಕೆ ಬೇಕಾದ ಹಣವನ್ನು ಲೆಕ್ಕ ಹಾಕಿ ಕಮ್ಮಿಯಾದ ಹಣವನ್ನು ತಮ್ಮ ಕೈನಿಂದಲೇ ಪಾವತಿ ಮಾಡುತ್ತಿದ್ದರಂತೆ ಹಾಗೂ ಪ್ರಚಾರ ಬಯಸದೇ ಇರುವ ಅವರು ಹಣ ಸಂಗ್ರಹ ಪಟ್ಟಿಯಲ್ಲಿ ತಮ್ಮ ಹೆಸರನ್ನು ಅಂತ್ಯದಲ್ಲಿ ಬರೆಸುತ್ತಿದ್ದರು. ಕಾಲೇಜಿಗೆ ಬರುವ ಸಾಮಾನ್ಯ ವರ್ಗದ ಮಕ್ಕಳಿಗೆ ಹೊರೆಯಾಗಬಾರದೆಂಬ ಉದ್ದೇಶದಿಂದ ಹೆಚ್ಚಿನ ಹಣವನ್ನು ತಾವೇ ನೀಡುತ್ತಾ ವಿದ್ಯಾರ್ಥಿ ದೆಸೆಯಿಂದಲೇ ಬಡವರ ಬಗ್ಗೆ ಅತೀವ ಕಾಳಜಿ ಹೊಂದಿದ್ದರು.
ಮಹಾರಾಜರ ಸರಳ ವ್ಯಕ್ತಿತ್ವ ಅವರು ಧರಿಸುತ್ತಿದ್ದ ಉಡುಪಿನಲ್ಲೂ ಎದ್ದುಕಾಣುತ್ತಿತ್ತು. ಅವರು ಸಾಮಾನ್ಯವಾಗಿ ಧರಿಸುತ್ತಿದ್ದದ್ದು, ಅಚ್ಚ ಬಿಳುಪಿನ ವಸ್ತ್ರ. ವಿದುಷಿ ಸುಗುಣಾಂಬ ಎಂಬ ವೀಣಾ ವಾದಕಿಯ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಅವರ ಮಗಳು ಶೈಲಶ್ರೀ ಎಂಬಾಕೆ ತಾಯೊಂದಿಗೆ ವೀಣೆ ನುಡಿಸಲು ಬಂದಿದ್ದರು. ಮಹಾರಾಜರನ್ನು ಕಾಣಬೇಕೆಂದು ಆಸೆಯಿಂದ ಇದ್ದ ಶೈಲಶ್ರೀ ಅವರಿಗೆ ನಿರಾಶೆಯಾಯಿತಂತೆ. ಮಹಾರಾಜರೆಂದರೆ ರಾಜ ಪೋಷಾಕು, ಸರ್ವಾಭರಣ ಭೂಷಿತರಾಗಿ, ಠೀವಿಯಿಂದ ಇರುತ್ತಾರೆ ಎಂಬ ಕಲ್ಪನೆಯಿತ್ತು. ಆದರೆ, ಸಾಧಾರಣ ಉಡುಗೆಯಲ್ಲಿದ್ದ ಅವರನ್ನು ರಾಜರೆಂದು ಗುರುತಿಸಲು ಶೈಲಶ್ರೀಗೆ ಕಷ್ಟವಾಗಿತ್ತು.
ನನಗೆ ಧರ್ಮಸ್ಥಳದಲ್ಲಿ ಪಟ್ಟವಾದ ಸಂದರ್ಭದಲ್ಲೇ ಮೈಸೂರಿನಲ್ಲಿ ಕೊನೆಯ ಖೆಡ್ಡ ಆಯೋಜನೆ ನಡೆದಿತ್ತು. ಖೆಡ್ಡಎಂದರೆ ಕಾಡಾನೆಗಳನ್ನು ವ್ಯವಸ್ಥಿತವಾಗಿ ಓಡಿಸಿಕೊಂಡು ಬಂದು, ಒಂದು ಕಡೆ ಸಣ್ಣಜಾಗದಲ್ಲಿ ಮರದ ದಿಮ್ಮಿಗಳನ್ನು ಒಟ್ಟುಗೂಡಿಸಿ, ಬೋನಿನಂತೆ ಮಾಡಿ ಅದರಲ್ಲಿ ಬಂಧಿಸುವುದು. ಬಳಿಕ ಒಂದೊಂದೇ ಆನೆಯ ಕಾಲಿಗೆ ಹಗ್ಗ ಹಾಕಿ ಅವುಗಳನ್ನು ಪಳಗಿಸಲಾಗುತ್ತದೆ. ಈ ಖೆಡ್ಡವನ್ನು ನೋಡಲು ನಾನು ಹೋಗಿದ್ದೆ. ನಮಗೆಲ್ಲ ಪಾಸ್ ನೀಡಲಾಗಿತ್ತು. ನಮ್ಮ ಮುಂದಿನ ಕುರ್ಚಿಯಲ್ಲಿ ಜಯಚಾಮರಾಜ ಒಡೆಯರ್ ಕುಳಿತಿದ್ದರು. ಆ ಸಂದರ್ಭ ಈಗಲೂ ನೆನಪಾಗುತ್ತದೆ. ಅಲ್ಲಿ ಬರುವ ಎಲ್ಲರಿಗೂ ಅವರು ನಮಸ್ಕರಿಸಿ ಗೌರವ ನೀಡುತ್ತಿದ್ದರು. ಅಧಿಕಾರಿ ವರ್ಗ, ಅಥವಾ ಶ್ರೀಮಂತರು, ಜನ ಸಾಮಾನ್ಯರು ಎಂಬ ಭೇದವೆಣಿಸದೆ, ಎಲ್ಲರಿಗೂ ಹಸ್ತಲಾಘವ ಮಾಡುತ್ತಿದ್ದರು. ಅದರಲ್ಲೂ ವಿಶೇಷವಾಗಿ ಯಾವ ಮಹಿಳೆ ಬಂದರೂ ಅವರಿಗೆ ಎದ್ದು ನಿಂತು ನಮಸ್ಕರಿಸಿ, ಕುಶಲ ವಿಚಾರಿಸುತ್ತಿದ್ದರು. ಮಹಾರಾಜರ ಬಗ್ಗೆ ನನ್ನಲ್ಲೂ ಸಾಕಷ್ಟು ಕಲ್ಪನೆಗಳಿದ್ದವು. ಉತ್ತಮ ಪೋಷಾಕಿನಲ್ಲಿರುತ್ತಾರೆ. ಕೋಟು ಧರಿಸಿರುತ್ತಾರೆ ಎಂದೆಲ್ಲ ಭಾವಿಸಿದ್ದೆ. ಆದರೆ, ಅವರು ಬೇಸಿಗೆಯಲ್ಲಿ ಹೆಚ್ಚಾಗಿ ಧರಿಸುವ ಬಿಳಿ ಬಟ್ಟೆ ಹಾಗೂ ಸಾಧಾರಣವಾದ ಪೈಜಾಮ ತೊಟ್ಟಿದ್ದರು.
ಖೆಡ್ಡಾ ನಡೆಯುವಾಗ ಆನೆಗಳನ್ನೆಲ್ಲ ಜನರು ತಮಟೆ, ಕಹಳೆಗಳನ್ನು ಊದಿ ಓಡಿಸಿಕೊಂಡು ಬರುತ್ತಿದ್ದರು. ಇದನ್ನು ನೋಡಲು ಬಹಳ ಎತ್ತರವಾದ, ಸುರಕ್ಷಿತ ಜಾಗದಲ್ಲಿ ನಮ್ಮನ್ನೆಲ್ಲ ಕುಳ್ಳಿರಿಸಿದ್ದರು. ಓಡಿಕೊಂಡು ಬಂದ ಆನೆಗಳು ತಪ್ಪಿಸಿಕೊಳ್ಳಲಾರದೆ, ಸುತ್ತಲೂ ಜನರು ಮಾಡುತ್ತಿದ್ದ ಸದ್ದನ್ನು ಕೇಳಿ ಬೆದರಿ, ನಿರ್ದಿಷ್ಟವಾದ ಜಾಗದಲ್ಲಿ ತೂರಿಕೊಂಡವು. ಕೂಡಲೇ ಹೊರಗಡೆಯಿಂದ ಗೇಟ್ ಹಾಕಲಾಯಿತು. ಹೀಗೆ ಅಲ್ಲಿ ನಡೆಯುತ್ತಿದ್ದ ಪ್ರತಿ ಸಂಗತಿಗಳನ್ನು ಮಹಾರಾಜರು ಅಲ್ಲಿ ಇದ್ದ ವಿದೇಶಿಯರು, ಗಣ್ಯರಿಗೆ ವಿವರಿಸುತ್ತಿದ್ದರು. ಅದು ನನಗೂ ಬಹಳ ಕುತೂಹಲವಾಯಿತು.
ಖೆಡ್ಡಾ ವೀಕ್ಷಿಸಿದ ಬಳಿಕ ಎಲ್ಲರೂ ಅಲ್ಲಿಂದ ತೆರಳಿದರು. ಮಹಾರಾಜರು ತಮ್ಮ ಡ್ಯಾಮ್ಲರ್ ಕಾರ್ನಲ್ಲಿ ಸಾಗುತ್ತಿದ್ದರು. (ಇದೀಗ ಧರ್ಮಸ್ಥಳದ ಮಂಜೂಷಾ ವಾಹನ ಸಂಗ್ರಹಾಲಯದಲ್ಲಿದೆ) ಆಕಸ್ಮಾತ್ ಆಗಿ ನಾವು ಕೂಡ ಆ ಕಾರಿನ ಹಿಂಭಾಗದಲ್ಲೇ ಪಯಣಿಸಬೇಕಾದ ಸಂದರ್ಭ ಬಂತು. ಆಗ ರಸ್ತೆಯ ಇಕ್ಕೆಲಗಳಲ್ಲೂ ಜನರು ನಿಂತಿರುವುದನ್ನು ಕಂಡೆ. ಅವರೆಲ್ಲ ಮಹಾರಾಜರ ಕಾರು ಬರುತ್ತಲೇ ಕಾರಿಗೇ ಅಡ್ಡ ಬಿದ್ದು ನಮಸ್ಕರಿಸುತ್ತಿದ್ದರು. ಇಂತಹ ರಾಜಭಕ್ತಿಯನ್ನು ಕಂಡು ನಾನು ದಂಗಾಗಿ ಹೋಗಿದ್ದೆ. ಕಾರಿಗೆ ನಮಸ್ಕರಿಸುವಷ್ಟರ ಮಟ್ಟಿಗೆ ರಾಜನ ಮೇಲೆ ಗೌರವ, ಪ್ರೀತಿ, ಭಕ್ತಿಗಳು ಅಲ್ಲಿನ ಜನತೆಗಿತ್ತು.
ಮೊದಲಿಗೆ ನನ್ನ-ಮಹಾರಾಜರ ಭೇಟಿಯಾದದ್ದು ಧರ್ಮಸ್ಥಳದಲ್ಲಿಯೇ. 50-60ರ ದಶಕದ ನಡುವೆ ಇರಬಹುದು. ಮೈಸೂರಿನ ಮಹಾರಾಜ ದಂಪತಿ ಬರುತ್ತಾರೆ ಎಂದು ನಮ್ಮ ತಾಯಿ ಮೈಸೂರಿನ ಕಾಡಯ್ಯ ವಸ್ತ್ರ ಮಳಿಗೆಯವರನ್ನು ಕರೆದು ಮಹಾರಾಣಿಯವರು ಬಂದಾಗ ಉಡಲು ಒಳ್ಳೆಯ ರೇಷ್ಮೆ ಸೀರೆಯನ್ನೇ ತೋರಿಸಿ ಎಂದು ಕೇಳಿದ್ದರಂತೆ. ಆಗ ಬಹಳ ಪ್ರಖ್ಯಾತ ಬನಾರಸ್ನ ಸಿಲ್ಕ್ ಸೀರೆಯನ್ನು ತಂದು ತೋರಿಸಿದ್ದರಂತೆ. ಬಹಳ ಸುಂದರವಾದ ಸೀರೆಗಳನ್ನು ಆಯ್ಕೆ ಮಾಡಿ ಅಮ್ಮ ಇಟ್ಟುಕೊಂಡಿದ್ದರು.
ಹಾಗೆಯೇ ಮಹಾರಾಜ ದಂಪತಿಗಳು ಶ್ರೀ ಕ್ಷೇತ್ರಕ್ಕೆ ಬಂದರು. ಅವರನ್ನು ನಾವೆಲ್ಲ ಅತ್ಯಂತ ಸಂಭ್ರಮದಿಂದ ಸ್ವಾಗತಿಸಿ, ಆತಿಥ್ಯದೊಡನೆ ಉಪಚರಿಸಿದೆವು. ಅವರನ್ನು ನೋಡುವುದೇ ನಮಗೆ ಖುಷಿಯ ಸಂಗತಿಯಾಗಿತ್ತು. ಮಹಾರಾಜರು ಮಾತ್ರವಲ್ಲದೆ, ಮಹಾರಾಣಿಯವರೂ ಅತ್ಯಂತ ಸರಳವಾಗಿದ್ದರು. ಉಪಚಾರ ಸ್ವೀಕರಿಸಿ, ಬಳಿಕ ಬಟ್ಟೆ ಬದಲಾಯಿಸಿ ದೇವಸ್ಥಾನಕ್ಕೆ ಹೋಗುವಾಗ ಸಾದಾ-ಸೀದಾ ಉಡುಗೆಯನ್ನೇ ತೊಟ್ಟಿದ್ದರು. ಅದನ್ನು ಕಂಡು ನನ್ನ ಅಮ್ಮನಿಗೆ ಸಂಕೋಚವಾಯಿತು. ಯಾಕೆಂದರೆ ಮಹಾರಾಣಿಯವರರಾಗಲಿ, ಮಹಾರಾಜರಾಗಲಿ ಯಾವುದೇ ರೇಷ್ಮೆ ಉಡುಪು ಅಥವಾ ರಾಜಪೋಷಾಕನ್ನು ಉಟ್ಟಿರಲಿಲ್ಲ. ನಾಚಿಕೆ, ಸಂಕೋಚದಿಂದ ಕುಗ್ಗಿ ಹೋಗಿದ್ದ ಅಮ್ಮ‘ಏನಿದು! ಮಹಾರಾಜ ದಂಪತಿಗಳು ರಾಜಪೋಷಾಕಿನಲ್ಲಿ ಬರುತ್ತಾರೆ ಎಂದು ಭಾವಿಸಿದ್ದೆ. ಆದರೆ, ಸರಳವಾಗಿದ್ದುಕೊಂಡು ನನ್ನನ್ನು ಗೊಂದಲಕ್ಕೀಡು ಮಾಡಿದರಲ್ಲ’ ಎಂದು ಪರಿತಪಿಸುತ್ತಿದ್ದರು. ಮುಂದೆ ದೇವಸ್ಥಾನದಲ್ಲಿ ಪುತ್ರ ಶ್ರೀಕಂಠದತ್ತ ಒಡೆಯರ್ ಅವರಿಗೆ ತುಲಾಭಾರವಾಯಿತು. ಆ ಸಂದರ್ಭದಲ್ಲಿ ಅವರಿಗೆ ಕುಳಿತುಕೊಳ್ಳಲು ಕುರ್ಚಿ ಹಾಕಲಾಯಿತು. ಬಹಳ ಹತ್ತಿರದಲ್ಲಿ ಮಹಾರಾಜರನ್ನು ಕಂಡು ಸಂತೋಷಪಟ್ಟಿದ್ದೆ. ಆ ಸಮಯದಲ್ಲಿ ತಂದೆಯವರಿಗೆ ಅವರು ಒಂದು ಉಡುಗೊರೆಯನ್ನು ಕೊಟ್ಟಿದ್ದರು, ಆ ಉಡುಗೊರೆಯಲ್ಲಿ ಗಂಡಭೇರುಂಡದ ಚಿಹ್ನೆ ಇತ್ತು. ಅದನ್ನು ಧರ್ಮಸ್ಥಳದ ಮಂಜೂಷಾ ವಸ್ತು ಸಂಗ್ರಹಾಲಯದಲ್ಲಿ ಈಗಲೂ ಪ್ರದರ್ಶನಕ್ಕಿಡಲಾಗಿದೆ.
ಒಂದೊಮ್ಮೆ, ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ಬಳಸುತ್ತಿದ್ದ, ಬ್ರಿಟಿಷ್ ನಿರ್ವಿುತ ಡ್ಯಾಮ್ಲರ್ ಕಾರನ್ನು ಮಾರಾಟ ಮಾಡಲು ಹೊರಟಿದ್ದಾರೆ ಎಂಬ ಸುದ್ದಿ ತಿಳಿದು ಬಂತು. ‘ಅದು ಯಾರ್ಯಾರ ಕೈಗೆ ಹೋಗುವ ಬದಲು ನಿಮ್ಮ ಕ್ಷೇತ್ರದಲ್ಲಿದ್ದರೆ ಒಳ್ಳೆಯದು. ಅದನ್ನು ನೀವೇ ಸಂಗ್ರಹಿಸಿ’ ಎಂಬ ಸೂಚನೆಯನ್ನು ಆಪ್ತರು ನಮಗೆ ನೀಡಿದರು. ನನಗೆ ಕಾರು ಕೊಳ್ಳುವ ಮನಸ್ಸಾದರೂ ರಾಜರನ್ನು ತಲುಪುವುದು ಹೇಗೆ? ತಮ್ಮ ವಾಹನವನ್ನು ಮಾರುತ್ತಿದ್ದೀರಂತೆ, ಅದನ್ನು ನಾವೇ ಕೊಳ್ಳುತ್ತೇವೆ ಎಂದು ಹೇಳುವುದು ಹೇಗೆ ಎಂದು ಸಂಕೋಚವಾಯಿತು. ಆಗ ನನಗೆ ನೆನಪಾಗಿದ್ದು ಆಗಿನ ಸುತ್ತೂರು ಮಠದ ಜಗದ್ಗುರು ಶ್ರೀ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಯವರಲ್ಲಿ ನಾನು ನೇರವಾಗಿ ಹೋಗಿ ಭಿನ್ನವಿಸಿಕೊಂಡೆ. ಸ್ವಾಮಿ ಮೈಸೂರು ಮಹಾರಾಜರು ಬಳಕೆ ಮಾಡುತ್ತಿದ್ದ ಬ್ರಿಟಿಷ್ ಮೂಲದ ಡ್ಯಾಮ್ಲರ್ ಕಾರು ಮಾರಾಟ ಮಾಡುತ್ತಿದ್ದಾರೆ ಎಂದು ತಿಳಿಯಿತು. ಅದು ಮಾರಾಟ ಮಾಡುವುದೇ ಹೌದಾದಲ್ಲಿ ನನಗೆ ತೆಗೆಸಿಕೊಡಬೇಕು ಎಂದು ಕೇಳಿಕೊಂಡೆ. ಆಗಲಿ ಕೇಳುತ್ತೇನೆ. ಆದರೆ, ಒಂದು ಶರತ್ತು ಇದೆ ಎಂದರು. ಆಗ ಶ್ರೀಗಳು, ಮಹಾರಾಜರಲ್ಲಿ ಚೌಕಾಶಿ ಮಾಡಬಾರದು. ಅವರು ಏನು ದರ ಹೇಳುತ್ತಾರೋ, ಎಷ್ಟು ಮೌಲ್ಯ ಹೇಳುತ್ತಾರೋ ಅಷ್ಟು ಮೌಲ್ಯಕೊಡಬೇಕಾಗುತ್ತದೆ ಎಂದರು. ಆಗಲಿ ಸ್ವಾಮೀಜಿ ಎಂದು ಒಪ್ಪಿಕೊಂಡೆ. ನನಗೆ ಆಗ ಅಂದಾಜು 23 ವರ್ಷ ವಯಸ್ಸು ಇರಬಹುದು. ಅಂದಾಜು 1970ನೇ ಇಸವಿ. ಮುಂದೆ ಒಂದು ದಿನ ನಿಗದಿ ಮಾಡಿ ಸ್ವಾಮೀಜಿಯವರು ನನ್ನನ್ನು ಮಹಾರಾಜರ ಬಳಿ ಕರೆದುಕೊಂಡು ಹೋಗಿ ಪರಿಚಯಿಸಿದರು. ಅಲ್ಲದೆ, ನಿಮ್ಮ ವಾಹನವನ್ನು ಇವರು ಕೊಳ್ಳಲು ಆಸಕ್ತರಾಗಿದ್ದಾರೆ ಎಂದರು. ಶ್ರೀಗಳ ಭೇಟಿಯ ಉದ್ದೇಶ ತಿಳಿದ ಮಹಾರಾಜರು, ಆಗಲಿ ನಾನು ವಾಹನ ಕೊಡಬೇಕು ಎಂದು ಇದ್ದೇನೆ ಎಂದಾಗ, ಎಷ್ಟು ಬೆಲೆ ನಿಗದಿ ಮಾಡುತ್ತೀರೋ ಅಷ್ಟು ಬೆಲೆಯನ್ನು ಹೆಗ್ಗಡೆಯವರು ಕೊಡಲು ಸಿದ್ಧರಿದ್ದಾರೆ ಎಂದು ಶ್ರೀಗಳು ಹೇಳಿದರು. ಮಹಾರಾಜರು ಆಯಿತು ಎಂದರು. ನಾವು ಹೊರಗೆ ಬಂದೆವು. ಮಹಾರಾಜರು ಅವರ ಅಧಿಕಾರಿಗಳೊಂದಿಗೆ ಮಾತನಾಡಿ ಅವರು 30,000 ರೂ. ಮೌಲ್ಯ ನಿಗದಿಪಡಿಸಿದರು. ಆಗಿನ ಕಾಲದಲ್ಲಿ ಪೂಜ್ಯ ಸ್ವಾಮೀಜಿಯರಿಗೆ ತಿಳಿಸಿದಂತೆ ಯಾವುದೇ ಚರ್ಚೆ ಮಾಡದೆ, ಮೂವತ್ತು ಸಾವಿರ ರೂಪಾಯಿ ಕೊಟ್ಟು ಕಾರನ್ನು ನಮ್ಮ ವಸ್ತು ಸಂಗ್ರಹಾಲಯಕ್ಕೆತಂದೆವು.
ಮುಂದೊಮ್ಮೆದೇವಸ್ಥಾನಕ್ಕೆ ಸಂಬಂಧಪಟ್ಟಂತೆ ಜ್ಯೋತಿಷ ಪ್ರಶ್ನಾವಳಿ ಕೇಳುವ ಸಂದರ್ಭ ಒದಗಿಬಂತು. ಆ ಸಂದರ್ಭದಲ್ಲಿ ಜ್ಯೋತಿಷ್ಯರು, ‘ನಿಮ್ಮಲ್ಲಿ ಒಂದು ಉತ್ತಮವಾದ ವಾಹನವಿದೆ. ಅದು ಬಹು ಯೋಗ್ಯವುಳ್ಳದ್ದಾಗಿದೆ. ಅದು ನಿಮ್ಮಕ್ಷೇತ್ರಕ್ಕೆ ಬಹುಅದೃಷ್ಟದ ವಾಹನ’ ಎಂದು ಹೇಳಿದರು. ಯಾವುದು ಕಾರು ಎಂದು ಕೇಳುತ್ತಾ ನಮ್ಮ ಸಂಗ್ರಹದಲ್ಲಿದ್ದ ಕಾರುಗಳ ಹೆಸರನ್ನು ಹೇಳುತ್ತಾ ಹೋದೆ. ಒಂದೊಂದು ಕಾರಿನ ಹೆಸರು ಹೇಳುವಾಗಲೂ ಅವರು ಇದಲ್ಲ ಇದಲ್ಲ ಎನ್ನುತ್ತಿದ್ದರು. ಮೈಸೂರು ಮಹಾರಾಜರ ಡ್ಯಾಮ್ಲರ್ ಕಾರ್ ಇರಬಹುದಾ ಎಂದು ಕೇಳಿದಾಗ, ಇದೇ ಕಾರು ಎಂದು ಉತ್ತರಿಸಿದರು. ಇದು ಬಹಳ ಶ್ರೇಷ್ಠವಾದ ವಾಹನ. ಇದನ್ನು ನೀವು ಸಂಪಾದಿಸಿದ್ದು ಬಹಳ ಉತ್ತಮವಾಯಿತು. ಇದರಿಂದ ನಿಮಗೆ ಮತ್ತು ಕ್ಷೇತ್ರಕ್ಕೆ ಬಹಳ ಕೀರ್ತಿ ಬರುತ್ತದೆ ಎಂಬ ಮಾತನ್ನು ಅವರು ಹೇಳಿದರು. ಇದನ್ನು ಯಾಕೆ ಉಲ್ಲೇಖಿಸುತ್ತಿದ್ದೇನೆ ಎಂದರೆ ಆ ಕಾರನ್ನು ಸಂಗ್ರಹಿಸಿದ ಸಂದರ್ಭ, ಸಂಗ್ರಹಿಸಿದ ರೀತಿ ಮತ್ತು ಸಂಗ್ರಹಾಲಯದಲ್ಲಿ ನಾವು ಅದನ್ನು ಇಟ್ಟುಕೊಂಡ ರೀತಿ ಮೂರನ್ನೂಉಲ್ಲೇಖಿಸಲು ಬಹಳ ಸಂತೋಷವಾಗುತ್ತದೆ.
ಬಹು ಸರಳರಾಗಿದ್ದ ಮಹಾರಾಜರು ಸ್ವಾತಂತ್ರಾ್ಯನಂತರ ಮೈಸೂರಿನ ರಾಜ್ಯಪಾಲರಾಗಿಯೂ ಬಹಳಷ್ಟು ಸೇವೆ ಮಾಡಿದರು. ಸಿಂಹಾಸನವನ್ನು ತ್ಯಜಿಸಿ ರಾಷ್ಟ್ರದೊಂದಿಗೆ ಏಕೀಕರಣಗೊಂಡರೂ, ಕೊನೆಯವರೆಗೂ ಅವರು ರಾಜರಾಗಿಯೇ ಇದ್ದರು. ಅವರ ಪುತ್ರ ಶ್ರೀಕಂಠದತ್ತ ಒಡೆಯರ್ ಕೂಡ ಶ್ರೀ ಕ್ಷೇತ್ರಕ್ಕೆ ಬಂದು ಕ್ಷೇತ್ರದಲ್ಲಿ ಸುತ್ತಾಡಿ ತಮ್ಮತೀರ್ಥರೂಪರು ಬಳಸುತ್ತಿದ್ದ ಕಾರನ್ನು ನೋಡಿ ಬಹಳ ಸಂತೋಷ ಪಟ್ಟು ಶುಭಾಶಯವನ್ನು ಹೇಳಿ ಹೋಗಿದ್ದರು.
ಜಯಚಾಮರಾಜೇಂದ್ರ ಒಡೆಯರ್ ಅವರ ವ್ಯಕ್ತಿತ್ವವನ್ನು ಯಾರಾದರೂ ಓದುವ ಆಸಕ್ತಿ ಇದ್ದರೆ ಡಾ.ಬಿ.ವಿ. ಸುಧಾಮಣಿ ಅವರು ರಚಿಸಿರುವ ‘ರಾಜರ್ಷಿ ಶ್ರೀಮನ್ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರ್- ಜೀವನ ಮತ್ತು ಸಾಧನೆಗಳು (1919-1974)’ ಪುಸ್ತಕವನ್ನು ಓದಿ ಹೆಚ್ಚಿನ ವಿಷಯಗಳನ್ನು ಪಡೆಯಬಹುದು.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)