ಡಾಲಿ, ಚಿಟ್ಟೆ ಕಡೆಯಿಂದ ಬಿಡುಗಡೆ ಆಯ್ತು 'ಶಂಭೋ ಶಿವ ಶಂಕರ' ಚಿತ್ರದ ಪೋಸ್ಟರ್​

WhatsApp Image 2020-08-15 at 2.15.08 PM
Published on

ಕರೊನಾ ಹಾವಳಿಯಿಂದ ನಾಲ್ಕು ತಿಂಗಳಿನಿಂದ ಕನ್ನಡ ಚಿತ್ರರಂಗ ಮಂಕಾಗಿತ್ತು. ಶ್ರಾವಣದ ಶುಭದಿನಗಳಲ್ಲಿ ಒಂದೊಂದೆ ಚಿತ್ರಗಳು ಆರಂಭಗೊಳ್ಳುತ್ತಿದ್ದು, ಚಿತ್ರರಂಗ ನಂಬಿರುವ ಅನೇಕರಿಗೆ ಸಂತಸದ ದಿನಗಳು ಆರಂಭವಾಗುವ ಲಕ್ಷಣಗಳು ಕಾಣುತ್ತಿದೆ. ಈ ಸಂದರ್ಭದಲ್ಲಿ ಆರಂಭವಾಗುತ್ತಿರುವ ನೂತನ ಚಿತ್ರಗಳಲ್ಲಿ ಅಘನ್ಯ ಪಿಕ್ಚರ್ಸ್ ಅವರು ನಿರ್ಮಿಸುತ್ತಿರುವ 'ಶಂಭೋ ಶಿವ ಶಂಕರ' ಚಿತ್ರ ಕೂಡ ಒಂದು.

ಸ್ವತಂತ್ರ ದಿನಾಚರಣೆಯ ಶುಭ ಸಂದರ್ಭದಲ್ಲಿ ಈ ಚಿತ್ರದ ಪೋಸ್ಟರ್ ಹಾಗೂ ಶೀರ್ಷಿಕೆಯನ್ನು ಕನ್ನಡ ಚಿತ್ರರಂಗದ ಖ್ಯಾತ ನಟರಾದ ಡಾಲಿ ಧನಂಜಯ ಹಾಗೂ ವಸಿಷ್ಠ ಸಿಂಹ ಬಿಡುಗಡೆಗೊಳಿಸಿದ್ದಾರೆ. ಸೆಪ್ಟೆಂಬರ್ ಮೊದಲವಾರದಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಬೆಂಗಳೂರಿನಲ್ಲಿ ಮಾತಿನ ಭಾಗದ ಚಿತ್ರೀಕರಣ ಹಾಗೂ ಕರ್ನಾಟಕದ ಸುಂದರ ಸ್ಥಳಗಳಲ್ಲಿ ಹಾಡುಗಳ ಚಿತ್ರೀಕರಣ ನಡೆಯಲಿದೆ.

ಕಿರುತೆರೆಯಲ್ಲಿ ಯಶಸ್ಸು ಕಂಡ 'ಜನುಮದ ಜೋಡಿ', 'ನಾಯಕಿ' ಧಾರಾವಾಹಿ ಗಳನ್ನು ನಿರ್ದೇಶಿಸಿರುವ ಶಂಕರ್ ಕೋನಮಾನಹಳ್ಳಿ ಈ ಚಿತ್ರದ ನಿರ್ದೇಶಕರು. ಬೆಳ್ಳಿತೆರೆಯಲ್ಲಿ ಶಂಕರ್ ಕೋನಮಾನಹಳ್ಳಿ ಅವರಿಗೆ ಇದು ಮೊದಲ ಚಿತ್ರ. ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ಶಂಕರ್ ಕೋನಮಾನಹಳ್ಳಿ ಅವರದೆ.

ಗೌಸ್ ಫೀರ್ ಹಾಗೂ ಹಿತನ್ ಹಾಸನ್ ಹಾಡುಗಳನ್ನು ಬರೆದಿದ್ದು, ಹಿತನ್ ಹಾಸನ್ ಅವರೆ ಸಂಗೀತ ನೀಡುತ್ತಿದ್ದಾರೆ‌. ನಟರಾಜ್ ಮುದ್ದಾಲ ಛಾಯಾಗ್ರಹಣ, ಕಲೈ ನೃತ್ಯ ನಿರ್ದೇಶನ, ವೆಂಕಟೇಶ್ ಯುಡಿವಿ ಸಂಕಲನ ಹಾಗೂ ಅಲ್ಟಿಮೆಟ್ ಶಿವು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

'ಶಂಭೋ ಶಿವ ಶಂಕರ' ಮೂರು ನಾಯಕ ಪಾತ್ರಗಳ ಹೆಸರಾಗಿದ್ದು, ಅಭಯ್ ಪುನೀತ್, ರೋಹಿತ್ ಹಾಗೂ ರಕ್ಷಕ್ ಈ ಮೂರು ಪಾತ್ರಗಳಲ್ಲಿ ಕಾಣಿಸಿಕೊಳುತ್ತಿದ್ದಾರೆ. ಈಗಾಗಲೇ ಕನ್ನಡದ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಸೋನಾಲ್ ಮಾಂಟೆರೊ ಈ ಚಿತ್ರದ ನಾಯಕಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net