

ಶಿಕಾರಿಪುರ: ತಾಲೂಕಿನಲ್ಲಿ ಬಹುತೇಕ ಸಮಾಜಗಳಿಗೆ ಭವನಗಳು ನಿರ್ಮಾಣವಾಗಿವೆ. ಇದರಿಂದ ವಿವಿಧ ಕಾರ್ಯಕ್ರಮ ಮಾಡಲು ಅನುಕೂಲವಾಗಲಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ತಿಮ್ಲಾಪುರದಲ್ಲಿ ಶ್ರೀ ಬೀರಲಿಂಗೇಶ್ವರ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಂದೊಂದು ಸಮಾಜದ ಆಚಾರ, ವಿಚಾರ ಸಂಪ್ರದಾಯಗಳು ಭಿನ್ನವಾಗಿದ್ದರೂ ನಮ್ಮದು ವಿಭಿನ್ನತೆಯಲ್ಲಿ ಏಕತೆ ಕಂಡ ನಾಡು. ಅಭಿವೃದ್ಧಿ ಪಥದಲ್ಲಿ ಮುಂಚೂಣಿಯಲ್ಲಿರುವ ತಾಲೂಕುಗಳ ಪೈಕಿ ಶಿಕಾರಿಪುರವೂ ಒಂದು. ಮಾಡಬೇಕಾದ ಅಭಿವೃದ್ಧಿ ಕಾರ್ಯಗಳು ಸಾಕಷ್ಟಿವೆ. ಆದರೆ ಅನುದಾನದ ಕೊರತೆಯಿಂದ ನಿರೀಕ್ಷಿತ ಕಾರ್ಯಗಳು ಆಗುತ್ತಿಲ್ಲ ಎಂದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಈ ಸಮುದಾಯ ಭವನವನ್ನು ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಸಮುದಾಯ ಭವನಗಳು ಆಯಾ ಸಮುದಾಯದ ಶ್ರದ್ಧಾಕೇಂದ್ರಗಳು. ಈ ಬಾರಿ ಮುಂಗಾರು ಮತ್ತು ಹಿಂಗಾರು ಮಳೆ ರೈತರನ್ನು ಕಂಗೆಡಿಸಿದೆ. ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಬಂದಿಲ್ಲ. ಹಿಂದಿನ ವರ್ಷದ ಬರದಿಂದಲೇ ರೈತರು ಇನ್ನೂ ಮೇಲಕ್ಕೇಳದ ಸ್ಥಿತಿಯಲ್ಲಿರುವಾಗ ಮತ್ತಷ್ಟು ತೊಂದರೆ ಅನುಭವಿಸಿದ್ದಾರೆ ಎಂದು ಹೇಳಿದರು.
ಕೇಂದ್ರ ಸರ್ಕಾರ ರೈತರು, ಮಹಿಳೆಯರು, ಕಾರ್ಮಿಕರ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಸಮುದಾಯದ ಪ್ರಗತಿಯಾದರೆ ದೇಶದ ಪ್ರಗತಿಯಾಗುತ್ತದೆ . ಸಂಘಟನಾತ್ಮಕ ಸಾಮಾಜಿಕ ಕಾರ್ಯಗಳನ್ನು ನಡೆಸಲು ಸಮುದಾಯ ಭವನಗಳು ಅನುಕೂಲವಾಗಿವೆ ಎಂದು ಹೇಳಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಹನುಮಂತಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ್, ಹಾಲಪ್ಪ ದೇವರಾಜ್, ಅರುಣ್, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಬೆಣ್ಣೆ ಪ್ರವೀಣ, ತಾಲೂಕು ಯುವ ಮೋರ್ಚಾ ಅಧ್ಯಕ್ಷ ವೀರನ ಗೌಡ ಇತರರಿದ್ದರು.