ಪಂಚತಾರಾ ಹೋಟೆಲ್​ನಲ್ಲಿ ರೂಮ್​ ಬಾಡಿಗೆ ಕೇವಲ 5 ಸಾವಿರ ರೂ....! ಅದಕ್ಕೊಂದು ಷರತ್ತಿದೆ

Taj hotels
Published on

ನವದೆಹಲಿ: ಸಾಮಾನ್ಯವಾಗಿ ಪಂಚತಾರಾ, ಐಷಾರಾಮಿ ಹೋಟೆಲ್​ಗಳಲ್ಲಿ ರೂಮ್​ ಬಾಡಿಗೆ ಕೇಳುವುದಂತೂ ಬೇಡವೇ ಬೇಡ. ಹತ್ತಾರು ಸಾವಿರ ರೂ.ಗಳಿಂದ ಲಕ್ಷಗಟ್ಟಲೇ ವಿಧಿಸಲಾಗುತ್ತದೆ. ಇನ್ನು ಸೀಸನ್​ಗಳಲ್ಲಂತೂ ಬೆಲೆಯನ್ನು ಇನ್ನೂ ಹೆಚ್ಚಿಸಲಾಗಿರುತ್ತದೆ.

ದೇಶದ ಐಷಾರಾಮಿ ಹೋಟೆಲ್​ ಸರಣಿ ಹೊಂದಿರುವ ತಾಜ್​ ಹೋಟೆಲ್​ಗಳಲ್ಲೂ ಕೊಠಡಿ ಬಾಡಿಗೆ ಕಡಿಮೇಯನಲ್ಲ. ಆದರೆ, ರಾಷ್ಟ್ರ ರಾಜಧಾನಿಯ ಐಷಾರಾಮಿ ಹೋಟೆಲ್​ಗಳಲ್ಲಿ ಒಂದಾದ ತಾಜ್​ ಮಾನ್​ಸಿಂಗ್​ ಹೋಟೆಲ್​ನಲ್ಲಿ ತಂಗಲು ರೂಮ್​ ಬಾಡಿಗೆಯನ್ನು ಐದು ಸಾವಿರ ರೂ. ಎಂದು ನಿಗದಿ ಪಡಿಸಲಾಗಿದೆ. ಅಚ್ಚರಿಯಾದರೂ ಇದು ಸತ್ಯ.

ಹಾಗೆಂದು ಎಲ್ಲರಿಗೂ ಇಲ್ಲಿ ತಂಗಲು ಅವಕಾಶವಿಲ್ಲ. ಈ ಪ್ರತಿಷ್ಠಿತ ಹೋಟೆಲ್​ಅನ್ನು ಸದ್ಯ ಸರ್​ ಗಂಗಾರಾಮ್​ ಆಸ್ಪತ್ರೆಯೊಂದಿಗೆ ಜೋಡಿಸಲಾಗಿದೆ. ಹೆಚ್ಚುತ್ತಿರುವ ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಹೆಚ್ಚುವರಿ ಕೊಠಡಿಗಳ ಅವಶ್ಯಕತೆ ಇರುವುದರಿಂದ ಈ ಹೋಟೆಲ್​ ಕೊಠಡಿಗಳನ್ನು ಕೋವಿಡ್​ ರೋಗಿಗಳ ವಾಸ್ತವ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇಡೀ ಹೋಟೆಲ್​ಅನ್ನು ಕೋವಿಡ್​ ಫ್ಯಾಸಿಲಿಟಿ ಆಗಿ ಬದಲಾಯಿಸಲಾಗಿದೆ.

ಸರ್ಕಾರ ಇಲ್ಲಿನ ಕೊಠಡಿಗಳ ಬಾಡಿಗೆಯನ್ನು ದಿನಕ್ಕೆ 5 ಸಾವಿರ ರೂ. ನಿಗದಿಪಡಿಸಿದೆ. ಜತೆಗೆ ಆಮ್ಲಜನಕ ಪೂರೈಕೆ ಹೊರತು ಪಡಿಸಿ ಇತರ ಚಿಕಿತ್ಸೆ ವೆಚ್ಚವಾಗಿ 5 ಸಾವಿರ ರೂ.ಗಳನ್ನು ಮಾತ್ರ ಪಡೆಯಬಹುದು.ಆಮ್ಲಜನಕ ಪೂರೈಸಿದರೆ ಹೆಚ್ಚುವರಿಯಾಗಿ 2 ಸಾವಿರ ರೂ. ಶುಲ್ಕ ವಿಧಿಸಬಹುದು ಎಂದು ಸೂಚಿಸಿದೆ.

ರೋಗಿಗಳಿಗೆ ಕೊಠಡಿ ಹಾಗೂ ಆಹಾರದ ವ್ಯವಸ್ಥೆ ಕಲ್ಪಿಸುವುದು ಹೋಟೆಲ್​ ಜವಾಬ್ದಾರಿಯಾದರೆ, ಆಸ್ಪತ್ರೆ ಚಿಕಿತ್ಸೆ ನೀಡಲಿದೆ. ಮೊತ್ತವನ್ನು ಆಸ್ಪತ್ರೆಗೆ ಪಾವತಿಸಬೇಕಿದ್ದು, ನಂತರ ಅದನ್ನು ಹೋಟೆಲ್​ ಪಡೆದುಕೊಳ್ಳಲಿದೆ. ರೋಗಿಗಳಿಗೆ ಸೇವೆ ನೀಡಲು ಅಗತ್ಯ ತರಬೇತಿಯನ್ನು ಹೋಟೆಲ್​ ಸಿಬ್ಬಂದಿಗೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net