

ನವದೆಹಲಿ: ಈಶಾನ್ಯ ದೆಹಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪದಡಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್ಐ) ಅಧ್ಯಕ್ಷ ಫರ್ವೇಜ್ ಅಹಮದ್ ಮತ್ತು ಕಾರ್ಯದರ್ಶಿ ಮಹಮ್ಮದ್ ಇಲಿಯಾಸ್ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಈಶಾನ್ಯ ದೆಹಲಿಯಲ್ಲಿ ಸಿಎಎ ಪರ ಹಾಗೂ ವಿರೋಧಿ ಪ್ರತಿಭಟನಾಕಾರರ ನಡುವೆ ಸಂಘರ್ಷ ಏರ್ಪಟ್ಟು, ಅದು ಹಿಂಸಾಚಾರವಾಗಿ ಮಾರ್ಪಟ್ಟಿತ್ತು. ಸುಮಾರು 53 ಮಂದಿ ಮೃತಪಟ್ಟಿದ್ದರು. ಹಲವರು ಗಾಯಗೊಂಡಿದ್ದರು. ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಪೊಲೀಸರು 712 ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಿ, 200 ಜನರನ್ನು ಬಂಧಿಸಿದ್ದರು.
ಹಿಂಸಾಚಾರದಲ್ಲಿ ದಂಗೆಕೋರರನ್ನು ಪ್ರಚೋದಿಸುವ ಕೆಲಸವನ್ನು ಇವರಿಬ್ಬರೂ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಹಾಗೇ ಈ ವೇಳೆ ಪ್ರತಿಭಟನಾಕಾರರಿಗೆ ಧನಸಹಾಯವನ್ನೂ ಮಾಡಿದ್ದಾರೆ. ಹಾಗಾಗಿ ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ಅಗತ್ಯವಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಫರ್ವೇಜ್ ಮತ್ತು ಇಲಿಯಾಸ್ನನ್ನು ದೆಹಲಿಯ ಪಟಿಯಾಲಾ ಕೋರ್ಟ್ಗೆ ಹಾಜರುಪಡಿಸಲಾಗುವುದು ಎಂದಿದ್ದಾರೆ.(ಏಜೆನ್ಸೀಸ್)