

ನವದೆಹಲಿ: ಸೋದರಸಂಬಂಧಿಯೊಬ್ಬ ಪಾರ್ಕಿನಲ್ಲೇ ಯುವತಿಯ ತಲೆಗೆ ರಾಡ್ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ಮಾಳವೀಯ ನಗರದಲ್ಲಿ ಶುಕ್ರವಾರ ನಡೆದಿದೆ. ಈ ಘಟನೆ ಜನತೆಗೆ ಆಘಾತಕ್ಕೆ ದೂಡಿದ್ದು, ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸಹ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮೃತ ವಿದ್ಯಾರ್ಥಿಯನ್ನು ನಗ್ರೀಸ್ ಎಂದು ಗುರುತಿಸಲಾಗಿದೆ. ಈಕೆ ಕಮಲ ನೆಗರು ಕಾಲೇಜಿನ ವಿದ್ಯಾರ್ಥಿನಿ. ಪೊಲೀಸರ ಪ್ರಕಾರ ಮದುವೆಗೆ ಒಪ್ಪದಿದ್ದಕ್ಕೆ ಆಕೆಯ ಸೋದರಸಂಬಂಧಿಯಿಂದಲೇ ಹತ್ಯೆಯಾಗಿದ್ದಾಳೆ. ಈ ಘಟನೆ ದೆಹಲಿಯ ಅರಬಿಂದೋ ಕಾಲೇಜಿನ ಸಮೀಪ ಇರುವ ಮಾಳವೀಯ ನಗರದಲ್ಲಿ ನಡೆದಿದೆ. 28 ವರ್ಷದ ಆರೋಪಿ ಇರ್ಫಾನ್ನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಇರ್ಫಾನ್ ಸ್ವಿಗ್ಗಿ ಆ್ಯಪ್ನಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಪ್ರಾಥಮಿಕ ತನಿಖೆಯ ಪ್ರಕಾರ ಇರ್ಫಾನ್ ಸಂಪಾದನೆ ಕಡಿಮೆ ಇರುವುದರಿಂದ ಆತನಿಗೆ ಮದುವೆ ಮಾಡಿಕೊಡಲು ನಗ್ರೀಸ್ ಕುಟುಂಬ ನಿರಾಕರಿಸಿತು. ಇದರ ಬೆನ್ನಲ್ಲೇ ನಗ್ರೀಸ್ ಕೂಡ ಆತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದಳು. ಇದರಿಂದ ಇರ್ಫಾನ್ ಅಸಮಾಧಾನಗೊಂಡಿದ್ದ. ಆಕೆ ನಿತ್ಯವೂ ಮಾಳವೀಯ ನಗರದಲ್ಲಿ ಕೋಚಿಂಗ್ ಕ್ಲಾಸ್ಗೆ ಹಾಜರಾಗುತ್ತಿದ್ದ ವಿಚಾರ ಇರ್ಫಾನ್ಗೆ ತಿಳಿದಿತ್ತು. ಅದೇ ದಾರಿಯಲ್ಲಿ ಪಾರ್ಕಿನಲ್ಲಿ ಇಂದು ಆಕೆಯನ್ನು ಇರ್ಫಾನ್ ಹತ್ಯೆ ಮಾಡಿದ್ದಾನೆ.
ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಇರ್ಫಾನ್ ಪಾರ್ಕ್ ತಲುಪಿದ. ಈ ವೇಳೆ ಆತನ ಎದುರಾಗ ನಗ್ರೀಸ್ಗೆ ಮಾತನಾಡುವ ಬಯಕೆ ವ್ಯಕ್ತಪಡಿಸಿದ. ಆದರೆ, ಆಕೆ ಆತನ ಮಾತು ಕೇಳಲು ನಿರಾಕರಿಸಿದಳು. ಇದರಿಂದ ಕುಪಿತಗೊಂಡ ಇರ್ಫಾನ್, ನಗ್ರೀಸ್ ಮೇಲೆ ಕಬ್ಬಿಣದ ಸಲಾಕೆಯಿಂದ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಮೂರು ದಿನದ ಮುಂಚೆಯೇ ಆಕೆಯನ್ನು ಹತ್ಯೆ ಮಾಡಬೇಕೆಂದು ಪ್ಲಾನ್ ಮಾಡಿದ್ದೇ ಎಂದು ಇರ್ಫಾನ್ ಪೊಲೀಸ್ ತನಿಖೆಯಲ್ಲಿ ಬಾಯ್ಬಿಟ್ಟಿದ್ದಾನೆ.
ಕೊಲೆಯ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ದೆಹಲಿ ದಕ್ಷಿಣ ವಿಭಾಗದ ಡೆಪ್ಯೂಟಿ ಪೊಲೀಸ್ ಕಮಿಷನರ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿ ನಗ್ರೀಸ್ ಮೃತದೇಹದ ಪಕ್ಕದಲ್ಲೇ ಒಂದು ಕಬ್ಬಿಣ ಸಲಾಕೆ ಪತ್ತೆಯಾಯಿತು. ನಗ್ರೀಸ್ ತಲೆಗೆ ಬಲವಾಗಿ ಹೊಡೆದಿರುವುದರಿಂದ ಸ್ಥಳದಲ್ಲೇ ನಗ್ರೀಸ್ ಮೃತಪಟ್ಟಿದ್ದಾಳೆ. ಸದ್ಯ ಇರ್ಫಾನ್ ಬಂಧನವಾಗಿದ್ದು, ವಿಚಾರಣೆ ಮುಂದುವರಿದಿದೆ.
ಈ ಘಟನೆಯ ಬಗ್ಗೆ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಾಲಿವಾಲ್ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಮಾಳವೀಯ ನಗರದಂತಹ ಐಷಾರಾಮಿ ಏರಿಯಾದಲ್ಲಿ ಯುವತಿಯೊಬ್ಬಳ ಮೇಲೆ ರಾಡ್ನಿಂದ ಹೊಡೆದು ಹಲ್ಲೆ ಮಾಡಿರುವುದನ್ನು ನೋಡಿದರೆ, ದೆಹಲಿ ಅತ್ಯಂತ ಅಸುರಕ್ಷಿತವಾಗಿದೆ. ಇದು ಯಾರಿಗೂ ಮುಖ್ಯವಲ್ಲ ಎನ್ನುವಂತಾಗಿದೆ. ಕೇವಲ ಪತ್ರಿಕಾ ವರದಿಗಳಲ್ಲಿ ಹುಡುಗಿಯರ ಹೆಸರುಗಳನ್ನು ಬದಲಾಯಿಸಲಾಗುತ್ತದೆ ಹೊರತು ಅಪರಾಧಗಳು ಮಾತ್ರ ದೆಹಲಿಯಲ್ಲಿ ನಿಲ್ಲುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. (ಏಜೆನ್ಸೀಸ್)