

ನವದೆಹಲಿ: ಕಾಣೆಯಾದ 76 ಮಕ್ಕಳನ್ನು ಪತ್ತೆ ಹೆಚ್ಚಿ ಪೋಷಕರ ಮಡಿಲು ಸೇರಿಸಿದ ದೆಹಲಿ ಪೊಲೀಸ್ ಇಲಾಖೆಯ ಹೆಡ್ಕಾನ್ಸ್ಟೇಬಲ್ ಸೀಮಾ ಢಾಕಾಗೆ ವಿಶೇಷ ಪದೋನ್ನತಿ ನೀಡಲಾಗಿದೆ. ಈಗ ಅವರು ಸಹಾಯಕ ಸಬ್ಇನ್ಸ್ಪೆಕ್ಟರ್ ಹುದ್ದೆಗೆ ಬಡ್ತಿ ಪಡೆದಿದ್ದಾರೆ.
ಹಿರಿತನ ಇನ್ನಿತರ ನಿಯಮಗಳನ್ನು ಮೀರಿ (ಔಟ್ ಆಫ್ ಟರ್ನ್) ಬಡ್ತಿ ನೀಡಿರುವುದು ಇದೇ ಮೊದಲ ಸಲವಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಸೀಮಾ ಪತ್ತೆ ಹೆಚ್ಚಿದ 76 ಮಕ್ಕಳಲ್ಲಿ 56 ಮಕ್ಕಳು 14 ವರ್ಷಕ್ಕಿಂತ ಕೆಳಗಿನ ವಯಸ್ಸಿನವರು ಎನ್ನುವುದು ಗಮನಾರ್ಹ. ಕೇವಲ ಮೂರು ತಿಂಗಳ ಅವಧಿಯಲ್ಲಿ ಸೀಮಾ 76 ಮಕ್ಕಳನ್ನು ಪತ್ತೆ ಹಚ್ಚಿ್ಚ್ದರು. ವಿಶೇಷ ಉತ್ತೇಜನ ಕಾರ್ಯಕ್ರಮದನ್ವಯ ಅವರಿಗೆ ಅವಧಿಗೂ ಮುನ್ನ ಬಡ್ತಿ ನೀಡಿ ಪ್ರೋತ್ಸಾಹಿಸಲಾಗಿದೆ. ಸೀಮಾ, ದೆಹಲಿಯ ಸಮಯಪುರ ಬದ್ಲಿ ಪೊಲೀಸ್ ಠಾಣೆಯಲ್ಲಿ ಹೆಡ್ಕಾನ್ಸ್ಟೇಬಲ್ ಆಗಿದ್ದರು. ಉತ್ತರ ಪ್ರದೇಶದ ಶಾಮ್ಲಿ ಎಂಬ ಊರಿನವರಾದ ಅವರು ರೈತ ಕುಟುಂಬದವರು. ಅವರಿಗೆ ಎಂಟು ವರ್ಷದ ಮಗನಿದ್ದಾನೆ.
‘ನನ್ನ ಪ್ರಯತ್ನಗಳಿಗೆ ಮಾನ್ಯತೆ ಸಿಕ್ಕಿರುವದಕ್ಕೆ ಖುಷಿಯಾಗಿದೆ. ಇದು ನನಗೆ ಇನ್ನಷ್ಟು ಸ್ಪೂರ್ತಿ ನೀಡುತ್ತದೆ. ಇತರರಿಗೂ ಪ್ರೋತ್ಸಾಹಕವಾಗವಾಗಬಹುದು. ಕರೊನಾ ಸಾಂಕ್ರಾಮಿಕತೆಯ ಹಾವಳಿ ಅವಧಿಯಲ್ಲೇ ನಾನು ಇಷ್ಟೆಲ್ಲ ಮಕ್ಕಳನ್ನು ಪತ್ತೆ ಮಾಡಿದ್ದೆ’ ಎಂದು ಸೀಮಾ ಹೇಳಿದ್ದಾರೆ. ನಾನು ಪತ್ತೆ ಮಾಡಿದ ಮಕ್ಕಳು ಪೋಷಕರೊಂದಿಗೆ ಸೇರಿಕೊಂಡಾಗ ಅತೀವ ಸಂತೋಷವಾಗುತ್ತಿತ್ತು. ಪೋಷಕರು ನನ್ನನ್ನು ಆಶೀರ್ವದಿಸುತ್ತಿದ್ದರು ಎಂದಿದ್ದಾರೆ.