

ನವದೆಹಲಿ: ಅಂತಾರಾಷ್ಟ್ರೀಯ ಅಂಗಾಂಗ ಕಸಿ ದಂಧೆಯನ್ನು ಭೇದಿಸಿದ ದೆಹಲಿ ಕ್ರೈಂಬ್ರಾಂಚ್ ಪೊಲೀಸರು ವೈದ್ಯರು ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದಾರೆ. ಈ ದಂಧೆಯ ಮಾಸ್ಟರ್ ಮೈಂಡ್ ಬಾಂಗ್ಲಾದೇಶಿ ಎಂದು ಕ್ರೈಂ ಬ್ರಾಂಚ್ನ ಉಪಪೊಲೀಸ್ ಆಯುಕ್ತ ಅಮಿತ್ ಗೋಯೆಲ್ ಹೇಳಿದ್ದಾರೆ. ರೋಗಿಗಳು ಮತ್ತು ದಾನಿಗಳನ್ನು ವ್ಯವಸ್ಥೆ ಮಾಡುವ ರಸೆಲ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದೇವೆ. ಕಸಿ ಮಾಡಿದ ಮಹಿಳಾ ವೈದ್ಯರನ್ನು ಸಹ ಬಂಧಿಸಲಾಗಿದೆ. ಬಂಧನಕ್ಕೊಳಗಾದ ವೈದ್ಯರು ಎರಡು ಅಥವಾ ಮೂರು ಆಸ್ಪತ್ರೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಅಲ್ಲದೆ ಈ ಮಹಿಳಾ ವೈದ್ಯೆ ದಾನಿ ಮತ್ತು ಸ್ವೀಕರಿಸುವವರು ರಕ್ತ ಸಂಬಂಧಿಗಳಲ್ಲ ಎಂದು ತಿಳಿದಾಗಲೂ ಅಂಗಾಂಗ್ ಕಸಿ ಮಾಡಲು ಸಹಕರಿಸುತ್ತಿದ್ದಳು. ಇದರಿಂದಾಗಿ ಈಕೆಯೂ ಪಿತೂರಿಯ ಭಾಗವಾಗಿದ್ದಾಳೆ ಎಂದು ಗೋಯೆಲ್ ಹೇಳಿದರು. ಭಾರತದ ಮಾನವ ಅಂಗಗಳ ಕಸಿ ಕಾಯಿದೆ (2014) ಪ್ರಕಾರ, ಅಂಗಾಂಗ ದಾನವನ್ನು ಪಾಲಕರು ಮತ್ತು ಒಡಹುಟ್ಟಿದವರಂತಹ ರಕ್ತ ಸಂಬಂಧಗಳಿಂದ ಮಾತ್ರ ಅನುಮತಿಸಲಾಗುತ್ತದೆ. ಯಾವುದೇ ಭಾರತೀಯ ಜೀವಂತ ದಾನಿಗಳು ತಮ್ಮ ಅಂಗಗಳನ್ನು ಹತ್ತಿರದ ಸಂಬಂಧಿಗಳಿಗೆ ನೀಡಬಹುದೇ ಹೊರತು ವಿದೇಶಿ ಸ್ವೀಕರಿಸುವವರಿಗೆ ದಾನ ಮಾಡಲು ಸಾಧ್ಯವಿಲ್ಲ.
ಈ ಪ್ರಕರಣದಲ್ಲಿ ದಾನಿ ಮತ್ತು ಸ್ವೀಕರಿಸುವವರು ಇಬ್ಬರೂ ಬಾಂಗ್ಲಾದೇಶದವರಾಗಿದ್ದರು. ಈ ದಂಧೆಯಲ್ಲಿ ತೊಡಗಿರುವ ವ್ಯಕ್ತಿಗಳು ಬಾಂಗ್ಲಾದೇಶದಲ್ಲಿ ಸಂಪರ್ಕ ಹೊಂದಿದ್ದರು. ಪ್ರತಿ ಕಸಿ ಮಾಡಲು ಅವರು 25-30 ಲಕ್ಷ ರೂಪಾಯಿಗಳನ್ನು ಪಡೆಯುತ್ತಿದ್ದರು. ಅವರು 2019ರಿಂದ ಅಂಗಾಂಗ ದಂಧೆ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದಲ್ಲಿ ಬಂಧಿತ ಏಳು ಮಂದಿಯ ವಿಚಾರಣೆ ಮುಂದುವರಿದಿದೆ. ಬಂಧಿತ ಆರೋಪಿಗಳನ್ನು ದೆಹಲಿಯ ಪಶ್ಚಿಮ ವಿಹಾರ್ನ ಪವಾರ್, ಪಟೇಲ್ ನಗರದ ಅಸ್ಲಾಂ, ಕನ್ಹಯ್ಯಾ ನಗರದ ಪೂಜಾ ಕಶ್ಯಪ್, ಮಾಳವೀಯ ನಗರದ ಅಂಜಲಿ, ಹರಿಯಾಣದ ಸೋನಿಪತ್ನ ನೀರಜ್, ಕವಿತಾ ಮತ್ತು ರಿತು ಎಂದು ಗುರುತಿಸಲಾಗಿದೆ. (ಏಜೆನ್ಸೀಸ್)