ಕೈವ್: ಪ್ರಧಾನಿ ನರೇಂದ್ರ ಮೋದಿ ಎರಡು ದಿನದ ರಷ್ಯಾ ಪ್ರವಾಸಲ್ಲಿದ್ದು, 22ನೇ ರಷ್ಯಾ-ಭಾರತ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಮಾಸ್ಕೋದಲ್ಲಿ ಪ್ರಧಾನಿ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ಭೇಟಿಯನ್ನು ಯೂಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಖಂಡಿಸಿದ್ದು, ಇದು ಶಾಂತಿ ಪ್ರಯತ್ನಗಳಿಗೆ ವಿನಾಶಕಾರಿ ಹೊಡೆತ ಎಂದು ಆರೋಪಿಸಿದ್ದಾರೆ.
ಇದನ್ನು ಓದಿ: ಭಾರತ-ರಷ್ಯಾ ವಿಶ್ವಾಸಾರ್ಹ ಸ್ನೇಹಕ್ಕೆ ಇದೇ ಬುನಾದಿ; ‘ನಮೋ’ ಹೇಳಿದ್ದೇನು ಗೊತ್ತಾ?
ಕೀವ್‌ನಲ್ಲಿರುವ ಮಕ್ಕಳ ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡು ರಷ್ಯಾದ ಕ್ಷಿಪಣಿ ದಾಳಿ ಮಾಡಿದ ದಿನವೇ ಮೋದಿ ಅವರು ಪುಟಿನ್ ಅವರನ್ನು ಭೇಟಿಯಾಗಿದ್ದಾರೆ. ರಷ್ಯಾದ ಕ್ಷಿಪಣಿಗಳು ಯೂಕ್ರೇನಿಯನ್ ನಗರಗಳ ಮೇಲೆ ದಾಳಿ ಮಾಡಿದ್ದು ಕನಿಷ್ಠ 37 ಜನರು ಮೃತಪಟ್ಟಿದ್ದಾರೆ ಮತ್ತು 170 ಜನರು ಗಾಯಗೊಂಡಿದ್ದಾರೆ. ಒಂದೇ ದಿನದಲ್ಲಿ ಈ ದಾಳಿ ಹಾಗೂ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ನಾಯಕ ಮಾಸ್ಕೋದಲ್ಲಿ ವಿಶ್ವದ ಅತ್ಯಂತ ರಕ್ತಸಿಕ್ತ ಅಪರಾಧಿಯನ್ನು ಅಪ್ಪಿಕೊಳ್ಳುವುದನ್ನು ನೋಡಲು ನಿರಾಶೆಯಾಗಿದೆ. ಇದು ನಿರಾಶಾದಾಯಕ ಮತ್ತು ಶಾಂತಿ ಪ್ರಯತ್ನಗಳಿಗೆ ವಿನಾಶಕಾರಿ ಹೊಡೆತವಾಗಿದೆ ಎಂದು ಝೆಲೆನ್ಸ್ಕಿಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಮಾಸ್ಕೋ ತಲುಪುವ ಮುನ್ನವೇ ಯೂಕ್ರೇನ್ ರಾಜಧಾನಿ ಕೀವ್ ಸೇರಿದಂತೆ ಹಲವು ನಗರಗಳ ಮೇಲೆ ರಷ್ಯಾ ದಾಳಿ ನಡೆಸಿತ್ತು. ಅನೇಕ ಸ್ಥಳಗಳಲ್ಲಿ ನಡೆದ ಕ್ಷಿಪಣಿ ದಾಳಿಯಿಂದಾಗಿ 37 ಜನರು ಮೃತರಾಗಿದ್ದು, ಹಲವರು ಗಾಯಗೊಂಡರು.
ಯೂಕ್ರೇನ್ ಮೇಲಿನ ರಷ್ಯಾದ ಆಕ್ರಮಣವನ್ನು ಭಾರತ ಎಂದಿಗೂ ಬೆಂಬಲಿಸಲಿಲ್ಲ. ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವ ಸೇರಿದಂತೆ ಯುಎನ್ ಚಾರ್ಟರ್ ಅನ್ನು ಗೌರವಿಸುವ ಪರವಾಗಿ ಭಾರತ ಯಾವಾಗಲೂ ನಿಂತಿದೆ. ಯಾವುದೇ ಸಮಸ್ಯೆಗೆ ಯುದ್ಧಭೂಮಿಯಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಆದರೆ ಪರಿಹಾರ ಕಂಡುಕೊಳ್ಳಲು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಮಾತ್ರ ಸಾಧ್ಯ ಎಂದು ಪ್ರಧಾನಿ ಮೋದಿ ಈಗಾಗಲೇ ಹೇಳಿದ್ದಾರೆ. ಕಳೆದ ತಿಂಗಳು ಇಟಲಿಯಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಮೋದಿ ಅವರು ಝೆಲೆನ್ಸ್ಕಿ ಅವರನ್ನು ಭೇಟಿ ಮಾಡಿದ್ದರು. ಯೂಕ್ರೇನ್ ಸಂಘರ್ಷಕ್ಕೆ ಶಾಂತಿಯುತ ಪರಿಹಾರವನ್ನು ಬೆಂಬಲಿಸಲು ತನ್ನ ವಿಧಾನದಲ್ಲಿ ಎಲ್ಲ ಸಹಕಾರವನ್ನು ಮುಂದುವರಿಸುವುದಾಗಿ ಪ್ರಧಾನಿ ಹೇಳಿದ್ದರು. (ಏಜೆನ್ಸೀಸ್)