

ನವದೆಹಲಿ: ಮ್ಯಾಟ್ರಿಮನಿ ಸೈಟ್ (ವೈವಾಹಿಕ ತಾಣ)ಮೂಲಕ ಮಹಿಳೆಯರಿಗೆ ವಂಚಿಸುತ್ತಿದ್ದವನನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಆತನ ಬ್ಯಾಂಕ್ ಅಕೌಂಟ್ನ್ನೂ ಜಪ್ತಿ ಮಾಡಿ, ಸ್ಥಗಿತಗೊಳಿಸಿದ್ದಾರೆ.
ವಂಚಕನ ಹೆಸರು ವಿಶಾಲ್ ಟೋಕಾಸ್. ಮದುವೆ ಮ್ಯಾಟ್ರಿಮನಿ ಸೈಟ್ಗಳ ಮುಖಾಂತರ ಹಲವು ಮಹಿಳೆಯರಿಗೆ ಮೋಸ ಮಾಡಿ, ಅವರಿಂದ ಹಣ ಪೀಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆತನ ಬ್ಯಾಂಕ್ ಅಕೌಂಟ್ನಲ್ಲಿ ಸುಮಾರು 4.6 ಲಕ್ಷ ರೂಪಾಯಿ ಇತ್ತು.
ಈತ ಮ್ಯಾಟ್ರಿಮನಿ ಸೈಟ್ನಲ್ಲಿ ತನ್ನನ್ನು ಓರ್ವ ಬ್ರಿಟಿಷ್ ಪ್ರಜೆ ಎಂದು ಪರಿಚಯಿಸಿಕೊಂಡಿದ್ದ. ಹಾಗೇ ನಾನೊಬ್ಬ ವಿಚ್ಚೇದಿತ ಎಂದೂ ಹೇಳಿಕೊಂಡು ಮಹಿಳೆಯೋರ್ವರಿಗೆ ಮೋಸ ಮಾಡಿದ್ದ. ಆ ಮಹಿಳೆಯ ದೂರಿನ ಅನ್ವಯ ಪೊಲೀಸರು ತನಿಖೆ ಪ್ರಾರಂಭಿಸಿ, ಆತನನ್ನು ಬಂಧಿಸಿದ್ದಾರೆ.
ವಿಶಾಲ್ ನನ್ನ ಬಳಿ ಬ್ರಿಟಿಷ್ ಪ್ರಜೆಯೆಂದು ಹೇಳಿಕೊಂಡಿದ್ದ. ತುಂಬ ನಂಬಿಕೆ ಬರುವಂತೆ ವರ್ತಿಸಿದ್ದ. ನಾನೂ ಒಪ್ಪಿ ಮದುವೆಯಾಗಲು ನಿರ್ಧರಿಸಿದ್ದೆ. ನನ್ನೊಂದಿಗೆ ವಾಟ್ಸ್ಆ್ಯಪ್ ಚಾಟ್ ಮಾಡುತ್ತಿದ್ದ. ಒಂದು ದಿನ ಅರ್ಜೆಂಟ್ ಆಗಿ ಸ್ವಲ್ಪ ಹಣ ಬೇಕು. ಹಣ ಸಿಗುತ್ತಿದ್ದಂತೆ ನಿನ್ನನ್ನು ಮದುವೆಯಾಗುತ್ತೇನೆ ಎಂದಿದ್ದ. ನಾನೂ ನಂಬಿ 1,21,900 ರೂಪಾಯಿಯನ್ನು ಆನ್ಲೈನ್ ಬ್ಯಾಂಕಿಂಗ್ ಮೂಲಕ ಆತನ ಖಾತೆಗೆ ಹಣ ಹಾಕಿದ್ದೆ. ಆದರೆ ನಂತರ ಅವನು ಚಾಟ್ಗೂ ಸಿಗಲಿಲ್ಲ. ಕಾಲ್ ಮಾಡಿದರೂ ಕನೆಕ್ಟ್ ಆಗಲಿಲ್ಲ ಎಂದು ಹಣ ಕಳೆದುಕೊಂಡ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪೊಲೀಸರು ಆರೋಪಿಯನ್ನು ಆತನ ಫೋನ್ ನಂಬರ್ ಟ್ರೇಸ್ ಮಾಡುವ ಮೂಲಕ ಹಿಡಿಯಲು ಯತ್ನಿಸಿದಾಗ, ಎಲ್ಲವೂ ಸುಳ್ಳು ಗುರುತು ಪತ್ರಗಳನ್ನು ನೀಡಿ ಪಡೆದವು ಎಂಬ ವಿಚಾರ ಬಯಲಿಗೆ ಬಂತು. ಮಹಿಳೆ ಕೊಟ್ಟಿದ್ದ ಬ್ಯಾಂಕ್ ಅಕೌಂಟ್ ಪರಿಶೀಲನೆ ನಡೆಸಿದಾಗ ಆ ಅಕೌಂಟ್ಗೆ ಹಲವು ವಿವಿಧ ಖಾತೆಗಳಿಂದ ನಿರಂತರವಾಗಿ ಹಣ ಬರುತ್ತಲೇ ಇವೆ ಎಂಬ ಸತ್ಯ ಬೆಳಕಿಗೆ ಬಂದಿದೆ. ಈತ ಮ್ಯಾಟ್ರಿಮನಿಯಲ್ಲಿ ಮಹಿಳೆಯರನ್ನು ವಂಚಿಸುವುದನ್ನೇ ವೃತ್ತಿಯಾಗಿಸಿಕೊಂಡಿದ್ದಾನೆ ಎಂಬುದೂ ಗೊತ್ತಾಯಿತು. ಹಾಗೇ ಸಫ್ದರ್ಜಂಗ್ ನಲ್ಲಿರುವ ಬ್ಯಾಂಕ್ ಶಾಖೆಯಲ್ಲಿ ಆತ ಹಣ ವಿತ್ಡ್ರಾ ಮಾಡಿದ್ದನ್ನು ಗೊತ್ತುಪಡಿಸಿಕೊಂಡ ಪೊಲಿಸರು ಶೀಘ್ರವೇ ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ‘ರಾಬರ್ಟ್’ ನಾಯಕಿ ಹುಟ್ಟುಹಬ್ಬಕ್ಕೆ ಚಿತ್ರತಂಡದ ಗಿಫ್ಟ್!
ಈತ ವಿಚ್ಛೇದಿತ ಮಹಿಳೆಯರನ್ನೇ ಟಾರ್ಗೆಟ್ ಮಾಡಿ, ಅವರನ್ನು ಮದುವೆಯಾಗುತ್ತೇನೆ ಎಂದು ಹೇಳುತ್ತಿದ್ದ. ನಂಬಿಕೆ ಹುಟ್ಟುವಂತೆ ಮಾತನಾಡಿ, ದುಬಾರಿ ಬೆಲೆಯ ಗಿಫ್ಟ್ಗಳ ಆಮಿಷವೊಡ್ಡುತ್ತಿದ್ದ. ನಂತರ ಹಣ ಪಡೆದು ಪರಾರಿಯಾಗುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈತ ಪಕ್ಕಾ ಕ್ರಿಮಿನಲ್ ಆಗಿದ್ದು, ಕರ್ನಾಟಕದಲ್ಲೂ ಎರಡು ಪ್ರಕರಣಗಳು ದಾಖಲಾಗಿವೆ ಎಂದೂ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)