

ನಟ-ನಟಿಯರು ಒಂದು ಚಿತ್ರಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂದು ಕುತೂಹಲದಿಂದ ಬಾಲಿವುಡ್ ಪಂಡಿತರು ಗಮನಿಸುತ್ತಲೇ ಇರುತ್ತಾರೆ. ಅಷ್ಟೇ ಅಲ್ಲ, ಕಲಾವಿದರ ಸಂಭಾವನೆ ವಿಷಯ ಆಗಾಗ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗುತ್ತಿರುತ್ತದೆ.
ಬಾಲಿವುಡ್ನ ಅಸಂಖ್ಯ ಸ್ಟಾರ್ಗಳ ಮಧ್ಯೆ ದೀಪಿಕಾ ಪಡುಕೋಣೆ ಅವರ ಸಂಭಾವನೆ ಎಷ್ಟು ಗೊತ್ತಾ? ದೀಪಿಕಾ ಒಂದು ಚಿತ್ರಕ್ಕೆ 10ರಿಂದ 12 ಕೋಟಿ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಬಾಲಿವುಡ್ನ ಬೇಡಿಕೆಯ ಮತ್ತು ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ದೀಪಿಕಾ ಪಡುಕೋಣೆ ಸಹ ಒಬ್ಬರಾಗಿದ್ದಾರೆ.
ದೀಪಿಕಾ ಏನೋ ಒಂದು ಚಿತ್ರಕ್ಕೆ 10ರಿಂದ 12 ಕೋಟಿ ಸಂಭಾವನೆ ಪಡೆಯುತ್ತಾರೆ. ಅವರನ್ನು ಸದಾ ಎಲ್ಲರಿಂದ ಕಾಪಾಡುವ ಅವರ ಬಾಡಿಗಾರ್ಡ್ ಸಂಭಾವನೆ ಎಷ್ಟಿರಬಹುದು ಎಂದು ಯಾವತ್ತಾದರೂ ಯೋಚಿಸಿದ್ದೀರಾ? ಹಾಗೆ ಯಾರೂ ಯೋಚಿಸುವುದಿಲ್ಲ ಬಿಡಿ. ಏಕೆಂದರೆ, ಅವರಿಗೆಲ್ಲಾ ಎಷ್ಟು ಸಿಗಬಹುದು ಅಥವಾ ಹೆಚ್ಚು ಸಿಗಲಾರದು ಎಂಬ ನಂಬಿಕೆ ಎಲ್ಲರಲ್ಲೂ ಇರುತ್ತದೆ. ಆದರೆ, ದೀಪಿಕಾ ಬಾಡಿಗಾರ್ಡ್ ತಿಂಗಳ ಸಂಬಳವನ್ನು ಕೇಳಿದರೆ, ನಿಜಕ್ಕೂ ತಲೆ ಸುತ್ತುತ್ತದೆ. ಏಕೆಂದರೆ, ಅಷ್ಟೊಂದಿದೆ ಸಂಬಳ. ಸರಳವಾಗಿ ಹೇಳಬೇಕೆಂದರೆ, ದೀಪಿಕಾ ತಮ್ಮ ಬಾಡಿಗಾರ್ಡ್ಗೆ ವರ್ಷಕ್ಕೆ ಒಂದು ಕೋಟಿ ಸಂಬಳವನ್ನು ನೀಡುತ್ತಾರಂತೆ.
ದೀಪಿಕಾ ಅವರ ಬಾಡಿಗಾರ್ಡ್ ಹೆಸರು ಜಲಾಲ್. ಹಲವು ವರ್ಷಗಳಿಂದ ದೀಪಿಕಾ ಅವರನ್ನು ಅಭಿಮಾನಿಗಳಿಂದ, ದುಷ್ಟರಿಂದ ರಕ್ಷಿಸುತ್ತಾ ಬಂದಿದ್ದಾರೆ ಜಲಾಲ್. ಆಕೆಯ ನೆರಳಿನಂತೆ ಸದಾ ಜತೆಗಿರುವ ಜಲಾಲ್, ಇದುವರೆಗೂ ದೀಪಿಕಾಗೆ ಯಾವುದೇ ಸಮಸ್ಯೆ ಎದುರಾಗದ ಹಾಗೆ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡಿದ್ದಾರೆ. ಬರೀ ಅವರಷ್ಟೇ ಅಲ್ಲ, ದೀಪಿಕಾ ಸಹ ಜಲಾಲ್ ಅವರನ್ನು ತಮ್ಮ ಸಹೋದರನಂತೆ ಪರಿಗಣಿಸುತ್ತಾರೆ. ಅಷ್ಟೇ ಅಲ್ಲ, ಪ್ರತೀ ವರ್ಷ ರಾಖಿ ಸಹ ಕಟ್ಟುತ್ತಾರೆ.
ತಮ್ಮ ಅಣ್ಣನಂತಹ ಬಾಡಿಗಾರ್ಡ್ನನ್ನು ಚೆನ್ನಾಗಿ ನೋಡಿಕೊಳ್ಳುವ ದೀಪಿಕಾ, ಅವರಿಗೆ ಕೆಲವು ವರ್ಷಗಳ ಹಿಂದೆ ವರ್ಷಕ್ಕೆ 80 ಲಕ್ಷ ಸಂಬಳ ಕೊಡುತ್ತಿದ್ದರಂತೆ. ಅದು ಇಷ್ಟರಲ್ಲಿ ಒಂದು ಕೋಟಿ ಆಗಿರುತ್ತದೆ ಎಂದು ಹೇಳಲಾಗುತ್ತದೆ. ವರ್ಷಕ್ಕೆ ಒಂದು ಕೋಟಿ ಎಂದರೆ, ಪ್ರತೀ ತಿಂಗಳು ಎಂಟು ಲಕ್ಷ ಸಂಬಳ ಎಂದಾಯಿತು. ಬಾಡಿಗಾರ್ಡ್ಗಳಿಗೆ ಅಷ್ಟೊಂದು ಸಂಬಳ ನೀಡಲಾಗುತ್ತದಾ ಎಂದು ಆಶ್ಚರ್ಯವಾಗಬಹುದು. ಬಾಲಿವುಡ್ನಲ್ಲಿ ಹಲವು ನಟರ ಬಾಡಿಗಾರ್ಡ್ಗಳಿಗೆ ಇದಕ್ಕಿಂತ ಹೆಚ್ಚು ಸಂಭಾವನೆ ನೀಡಲಾಗುತ್ತಿದೆ ಎಂಬುದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ.