ಗರ್ಭಿಣಿ ಆನೆ ಸಾವಿನಲ್ಲಿ ಮುಸ್ಲಿಮರ ಹೆಸರು: ಪತ್ರಕರ್ತನಿಂದ ಕ್ಷಮೆಯಾಚನೆ

elephant
Published on

ಪಾಲಕ್ಕಾಡ್​: ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗರ್ಭಿಣಿ ಆನೆ ಮೃತಪಟ್ಟ ಸುದ್ದಿ ಇಡೀ ದೇಶದ ಜನರನ್ನೇ ತಲ್ಲಣಗೊಳಿಸಿತ್ತು. ಅನಾನಸ್​ ಹಣ್ಣಿನಲ್ಲಿ ಯಾರೋ ಕಿಡಿಗೇಡಿಗಳು ಪಟಾಕಿ ಇಟ್ಟಿದ್ದರಿಂದ ಅದನ್ನು ತಿಂದು ಆನೆ ಮೃತಪಟ್ಟಿರುವ ಬಗ್ಗೆ ಆರಂಭದಲ್ಲಿ ಎಲ್ಲೆಡೆ ಸುದ್ದಿಯಾಗಿದ್ದವು.

ಆನಂತರ ಹಣ್ಣಿನಲ್ಲಿ ಯಾರೂ ಉದ್ದೇಶಪೂರ್ವಕವಾಗಿ ಅಥವಾ ಆನೆಗೆ ನೀಡಲೆಂದು ಪಟಾಕಿ ಇಟ್ಟಿರಲಿಲ್ಲ. ಆಕಸ್ಮಿಕವಾಗಿ ಆನೆ ಈ ಹಣ್ಣನ್ನು ಸೇವಿಸಿದೆ ಎಂದು ಹೇಳಲಾಗಿದೆ. ಅದೇನಿದ್ದರೂ ಸತ್ಯಾಂಶದ ಬಗ್ಗೆ ಇನ್ನೂ ಬಹುವಿಧನಾದ ಚರ್ಚೆಗಳು ನಡೆಯುತ್ತಲೇ ಇವೆ.

ಆದರೆ ಈ ನಡುವೆಯೇ ಪತ್ರಕರ್ತ ಹಾಗೂ ಖಾಸಗಿ ವಾಹಿನಿಯೊಂದರ ಸುದ್ದಿ ನಿರೂಪಕ ದೀಪಕ್ ಚೌರಾಸಿಯಾ ತಮ್ಮ ಟ್ವಿಟರ್​ ಖಾತೆಯಲ್ಲಿ ಸುಳ್ಳು ಸುದ್ದಿ ಹರಡಿ ಇದೀಗ ಪೇಚಿಗೆ ಸಿಲುಕಿದ್ದಾರೆ. ಆನೆ ಮೃತಪಟ್ಟ ಪ್ರಕರಣ ಕುರಿತಂತೆ ನಕಲಿ ಸುದ್ದಿ ಪೋಸ್ಟ್ ಮಾಡಿದ್ದ ದೀಪಕ್ ಚೌರಾಸಿಯಾ ''ಕೇರಳದ ಗರ್ಭಿಣಿ ಆನೆ ಹತ್ಯೆ ಪ್ರಕರಣದಲ್ಲಿ ಅಮ್ಜದ್ ಆಲಿ ಹಾಗೂ ತಮೀಮ್ ಶೇಖ್ ಎಂಬಿಬ್ಬರನ್ನು ಬಂಧಿಸಲಾಗಿದೆ. ಈ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ'' ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು.

ಇವರ ಟ್ವೀಟ್​ ಅನ್ನು ನಂಬಿ ಸಹಸ್ರಾರು ಮಂದಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಅವರು ಈ ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ದೂರದರ್ಶನ ತನ್ನ ಸುದ್ದಿ ಪ್ರಸಾರದಲ್ಲಿ ಕೇರಳ ಪ್ರಕರಣದಲ್ಲಿ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ ಹಾಗೂ ಆತನನ್ನು 'ವಿಲ್ಸನ್' ಎಂದು ಗುರುತಿಸಲಾಗಿದೆ ಎಂದು ಹೇಳಿತ್ತು.

ನಂತರ ವಿಚಾರಣೆ ನಡೆಸಿದಾಗ ಚೌರಾಸಿಯಾ ಅವರು ಮುಸ್ಲಿಮರ ವಿರುದ್ಧ ದ್ವೇಷ ಸಾಧನೆಗಾಗಿ ಸುಳ್ಳು ಹೆಸರು ಸೃಷ್ಟಿಸಿದ್ದ ವಿಷಯ ಬಹಿರಂಗಗೊಂಡಿತು. ಈ ಬಗ್ಗೆ ತಿಳಿಯುತ್ತಲೇ ತಮ್ಮ ಟ್ವೀಟ್ ಅನ್ನು ಅವರು ಡಿಲೀಟ್ ಮಾಡಿದರು.

ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವಂತೆಯೇ ಕ್ಷಮೆಯಾಚಿಸಿರುವ ಅವರು, ''ಕೇರಳ ಆನೆ ಸಾವು ಪ್ರಕರಣ ಸಂಬಂಧ ನನ್ನ ಟ್ವಿಟ್ಟರ್ ಖಾತೆಯಿಂದ ಸುಳ್ಳು ಮಾಹಿತಿ ಪೋಸ್ಟ್ ಆಗಿದೆ. ನಿಜ ಹೊರಬಿದ್ದಾಗ ನನ್ನ ಟ್ವೀಟ್ ಡಿಲೀಟ್ ಮಾಡಿದ್ದೇನೆ. ನಾನೊಬ್ಬ ಪತ್ರಕರ್ತ ಹಾಗೂ ವಿಶ್ವಾಸಾರ್ಹತೆ ನನಗೆ ಬಹಳ ಮುಖ್ಯ. ನನ್ನಿಂದ ಯಾರಿಗಾದರೂ ನೋವುಂಟಾಗಿದ್ದರೆ ವಿಷಾದಿಸುತ್ತೇನೆ'' ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net