

ತಿರುವನಂತಪುರ: ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಗಳು ವೀಣಾ ಹಾಗೂ ಡೆಮಾಕ್ರಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ (ಸಿಪಿಐಎಂ) ರಾಷ್ಟ್ರಾಧ್ಯಕ್ಷ ಪಿ.ಎ. ಮೊಹಮ್ಮದ್ ರಿಯಾಜ್ ಅವರ ಮದುವೆಯು ಇಂದು ಪಿಣರಾಯಿ ವಿಜಯನ್ ಅಧಿಕೃತ ನಿವಾಸದಲ್ಲಿ ನೆರವೇರಿತು.
ವಧು-ವರ ಇಬ್ಬರಿಗೂ ಇದು ಎರಡನೆಯ ಮದುವೆ. ಇಬ್ಬರೂ ವಿಚ್ಛೇದಿತರಾಗಿದ್ದು, ರಿಯಾಜ್ ಅವರಿಗೆ ಇಬ್ಬರು ಮಕ್ಕಳು ಹಾಗೂ ವೀನಾ ಅವರಿಗೆ ಒಂದು ಮಗುವಿದೆ.
ಮುಖ್ಯಮಂತ್ರಿಗಳ ಮನೆಯಲ್ಲಿ ಬೆಳಗ್ಗೆ ಮದುವೆಯಾಗಿದ್ದು, ಕೇರಳದ ಇತಿಹಾಸದಲ್ಲಿ ಸಿಎಂ ಸರ್ಕಾರಿ ನಿವಾಸದಲ್ಲಿ ನಡೆದ ಮೊದಲ ಮದುವೆ ಇದು ಎನ್ನಲಾಗಿದೆ.
ಲಾಕ್ಡೌನ್ ನಿಯಮ ಹಾಗೂ ಕರೊನಾ ಬಿಕ್ಕಟ್ಟಿನ ಕಾರಣದಿಂದ ಮದುವೆಯಲ್ಲಿ 50 ಮಂದಿ ಮಾತ್ರ ಹಾಜರುಇದ್ದರು. ಕೇವಲ ಕುಟುಂಬದ ಆಪ್ತರ ಸಮ್ಮುಖದಲ್ಲಿ ಸರಳವಾಗಿ ವಿವಾಹ ನಡೆಯಿತು.
ವೀಣಾ ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಗಿದ್ದಾರೆ. ರಿಯಾಜ್ 2009ರ ಲೋಕಸಭೆ ಚುನಾವಣೆಯಲ್ಲಿ ಸಿಪಿಐ(ಎಂ) ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಅವರು ಸೋತಿದ್ದರು. ರಿಯಾಜ್ ತಂದೆ ನಿವೃತ್ತ ಐಪಿಎಸ್ ಅಧಿಕಾರಿ ಪಿ.ಎಂ. ಅಬ್ದುಲ್ ಖಾದರ್. ರಿಯಾಜ್ ತಮ್ಮ ಕಾಲೇಜು ದಿನಗಳಲ್ಲಿದ್ದಾಗಲೇ ರಾಜಕೀಯದಲ್ಲಿ ತೊಡಗಿಸಿಕೊಂಡರು. ಎಸ್ಎಫ್ಐ ಮೂಲಕ ರಾಜಕೀಯಕ್ಕೆ ಬಂದ ಅವರು ಇದೀಗ ಸಿಪಿಐಎಂ ಯುವಘಟಕವಾಗಿರುವ ಡಿವೈಎಫ್ಐ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. (ಏಜೆನ್ಸೀಸ್)