More

    ಕೈ ಹಿಡಿದ ನಿವೃತ್ತ ಐಎಎಸ್ ಅಧಿಕಾರಿ ಎಸ್.ಪುಟ್ಟಸ್ವಾಮಿ

    ಅರಕಲಗೂಡು: ನಿವೃತ್ತ ಐಎಎಸ್ ಅಧಿಕಾರಿ ಎಸ್.ಪುಟ್ಟಸ್ವಾಮಿ ಅವರು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಬುಧವಾರ ಕಾಂಗ್ರೆಸ್ ಸೇರ್ಪಡೆಯಾದರು.

    ಸಿಎಂ, ಡಿಸಿಎಂ ಕಾಂಗ್ರೆಸ್ ಪಕ್ಷದ ಬಾವುಟ ನೀಡಿ ಪುಟ್ಟಸ್ವಾಮಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಹಳ್ಳಿಮೈಸೂರು ಹೋಬಳಿ ಅಣ್ಣೇಚಾಕನಹಳ್ಳಿ ಗ್ರಾಮದವರು ಹಾಗೂ ಹೊಳೆನರಸೀಪುರ ತಾಲೂಕು ಕುರುಬರ ಸಂಘದ ಅಧ್ಯಕ್ಷರಾದ ಪುಟ್ಟಸ್ವಾಮಿ ಅವರು ರಾಮನಗರದಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದ ನಂತರ ರಾಜಕೀಯ ಜೀವನಕ್ಕೆ ಕಾಲಿರಿಸಿ ಕಳೆದ 2013ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿದ್ದರು. ಕಾಂಗ್ರೆಸ್ ಟಿಕೆಟ್ ಮೇಲೆ ಕಣ್ಣಿಟ್ಟು ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು. ಚುನಾವಣೆಯಲ್ಲಿ ಎ.ಮಂಜು ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿತು. ಇದರಿಂದ ಬೇಸರಗೊಂಡು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಟ್ಟಿದ್ದ ಕೆಜಿಪಿ ಪಕ್ಷ ಸೇರಿ ಚುನಾವಣೆಯಲ್ಲಿ ಸ್ಪರ್ಧಿಸಿ 15 ಸಾವಿರ ಮತ ಗಳಿಸಿದ್ದರು. ಕ್ಷೇತ್ರದಲ್ಲಿ ನಿರ್ಣಾಯಕ ಸಂಖ್ಯೆಯಲ್ಲಿರುವ ಕುರುಬ ಸಮುದಾಯದ ಮತಗಳನ್ನು ಸೆಳೆಯಲು ಅಂದು ಸಿದ್ದರಾಮಯ್ಯ ಅರಕಲಗೂಡಿನಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಪುಟ್ಟಸ್ವಾಮಿ ಅವರ ವಿರುದ್ಧ ಭಾಷಣ ಮಾಡಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಎ.ಮಂಜು ಚುನಾವಣೆಯಲ್ಲಿ ಗೆಲುವಿನ ದಡ ಸೇರಿದ್ದರು.

    ಕೆಜಿಪಿಯಲ್ಲಿ ಸೋಲು ಅನುಭವಿಸಿದ ಬಳಿಕ ಪುಟ್ಟಸ್ವಾಮಿ ಅವರು ರಾಜಕಾರಣದಲ್ಲಿ ಕೆಲ ವರ್ಷಗಳಿಂದ ತಟಸ್ಥರಾಗಿದ್ದರು. ಕಳೆದ ವಿಧಾನಸಭಾ ಚುನಾವಣೆ ವೇಳೆ ಪಕ್ಷೇತರ ಅಭ್ಯರ್ಥಿ ಎಂ.ಟಿ. ಕೃಷ್ಣೇಗೌಡ ಅವರ ಬಣದಲ್ಲಿ ಗುರುತಿಸಿಕೊಂಡಿದ್ದರು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಮರು ಸೇರ್ಪಡೆಯಾಗಿದ್ದಾರೆ. ಕ್ಷೇತ್ರದಲ್ಲಿ ಮತ ಗಳಿಕೆಗೆ ಅನುಕೂಲ ಆಗಲಿ ಎಂಬ ಲೆಕ್ಕಾಚಾರದಲ್ಲಿ ಕಳೆದ ತಿಂಗಳು ಎಂ.ಟಿ.ಕೃಷ್ಣೇಗೌಡ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದ ಕೈ ನಾಯಕರು ಈಗ ಪುಟ್ಟಸ್ವಾಮಿ ಅವರನ್ನು ಮರಳಿ ಪಕ್ಷಕ್ಕೆ ಸೆಳೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts