More

    ಸಿಎಂ ಸಂಧಾನಕ್ಕೆ ಮಣಿಯದ ವಿನಯ್   ಪಕ್ಷೇತರ ಸ್ಪರ್ಧೆ ಇರಾದೆ ಇನ್ನೂ ನಿಗೂಢ!

    ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದೆ ಅಸಮಾಧಾನಗೊಂಡಿದ್ದ ಇನ್‌ಸೈಟ್ಸ್-ಐಎಎಸ್ ತರಬೇತಿ ಸಂಸ್ಥೆಯ ಸಂಸ್ಥಾಪಕ ಜಿ.ಬಿ. ವಿನಯಕುಮಾರ್ ಪಕ್ಷೇತರ ಸ್ಪರ್ಧೆ ಇರಾದೆಯನ್ನು ಇದುವರೆಗೂ ಬಹಿರಂಗಗೊಳಿಸಿಲ್ಲ.
    ವಿಧಾನಸಭಾ ಕ್ಷೇತ್ರವಾರು ಪ್ರವಾಸ ಮಾಡಿರುವ ವಿನಯಕುಮಾರ್‌ಗೆ ಸ್ವತಂತ್ರ ಸ್ಪರ್ಧೆ ಮಾಡುವಂತೆ ಜನರ ಅಭಿಪ್ರಾಯ ವ್ಯಕ್ತವಾಗಿದೆ.  ಇದರ ನಡುವೆ ಕಣದಿಂದ ಹಿಂದೆ ಸರಿಯಲು ಒತ್ತಡ ಬರುತ್ತಿರುವ ಹಿನ್ನೆಲೆಯಲ್ಲಿ ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎನ್ನಲಾಗಿದೆ.
    ಶನಿವಾರವಷ್ಟೇ ಬೆಳ್ಳೂಡಿ ಮಠದಲ್ಲಿ ಕಾಗಿನೆಲೆ ಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಸಮ್ಮುಖದಲ್ಲಿ ಸಂಧಾನ ಸಭೆ ನಡೆದಿದೆ ಎನ್ನಲಾಗಿದೆ. ಆದರೆ ವಿನಯ್‌ಕುಮಾರ್ ಯಾವುದಕ್ಕೂ ಮಣೆ ಹಾಕಿಲ್ಲ.
    ಭಾನುವಾರ ಕೂಡ ಬೆಂಗಳೂರಿಗೆ ತೆರಳಿದ್ದ ವಿನಯ್‌ಕುಮಾರ್‌ಗೆ ಸಿಎಂ ಸಿದ್ದರಾಮಯ್ಯ ಅವರಿಂದ ಬುಲಾವ್ ಬಂದಿದ್ದು, ಅಲ್ಲಿಯೂ ತೆರಳಿ ಅವರ ಮನದಾಳವನ್ನೂ ಆಲಿಸಿದ್ದಾರೆ. ಅವರೊಂದಿಗೆ ನಿರಂಜನಾನಂದ ಪುರಿ ಸ್ವಾಮೀಜಿ ಹಾಗೂ ಜಿಲ್ಲಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಇದ್ದರು.
     ಪಕ್ಷೇತರ ಸ್ಪರ್ಧೆ ಬೇಡ, ಮುಂದೆ ಉತ್ತಮ ಭವಿಷ್ಯವಿದೆ ಎಂದು ಸಿಎಂ ಹೇಳಿದ್ದಾರೆ. ಆದರೂ ಅವರಿಗೆ ಸ್ವತಂತ್ರ ಸ್ಪರ್ಧೆಯಿಂದ ಗೆಲ್ಲುವ ಮನವರಿಕೆ ಮಾಡಿಕೊಟ್ಟಿದ್ದೇನೆ. ಸಿಎಂ ಭೇಟಿ ನಂತರದಲ್ಲಿ ಬಂಡಾಯ ಶಮನವಾಗಿದೆ ಎಂದೂ, ಪಕ್ಷೇತರ ಸ್ಪರ್ಧೆ ಮಾಡುವುದಿಲ್ಲ ಎಂದೂ ಯಾರೂ ಭಾವಿಸಬೇಕಿಲ್ಲ. ಇನ್ನೆರಡು ವಿಧಾನಸಭೆ ಸುತ್ತಾಡಿ ಅಂತಿಮ ಅಭಿಪ್ರಾಯ ಹೇಳುವುದಾಗಿ ವಿನಯ್ ಸ್ಪಷ್ಟಪಡಿಸಿದ್ದಾರೆ.
    ಇದರ ನಡುವೆಯೇ ದಾವಣಗೆರೆಯ ತಮ್ಮ ನಿವಾಸದಲ್ಲಿ ಸೋಮವಾರ ಬೆಳಗ್ಗೆ ಅಭಿಮಾನಿಗಳ ಸಭೆ ನಡೆಸಲಿರುವ ವಿನಯ್, ಅವರ ಅಭಿಪ್ರಾಯ ಪಡೆದು ಮುಂದಿನ ಹೆಜ್ಜೆ ಇಡಲಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಯುಗಾದಿ ಹಬ್ಬದ ಬಳಿಕವೇ ಅವರ ಅಂತಿಮ ನಿರ್ಧಾರ ಹೊರಬರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts