

ಚೆನ್ನೈ: ತಮಿಳು ಚಿತ್ರರಂಗ (ಕಾಲಿವುಡ್)ದ ಯುವ ನಿರ್ದೇಶಕ ಎ.ವಿ. ಅರುಣ್ ಪ್ರಶಾಂತ್ ಅವರು ಶುಕ್ರವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದಾರೆ. ಕೊಯಮತ್ತೂರಿನಿಂದ ಮೆಟ್ಟುಪಾಳ್ಯಂಗೆ ಪ್ರಯಾಣ ಮಾಡುವಾಗ ಈ ದುರ್ಘಟನೆ ನಡೆದಿದೆ.
ಪ್ರಶಾಂತ್ ನಿರ್ದೇಶನದ ಚೊಚ್ಚಲ ಚಿತ್ರ "4ಜಿ" ಬಿಡುಗಡೆ ದಿನಾಂಕಕ್ಕೆ ಎದುರು ನೋಡಲಾಗುತ್ತಿತ್ತು. ಆದರೆ, ಚಿತ್ರ ಬಿಡುಗಡೆಗೂ ಮುನ್ನವೇ ವಿಧಿಯಾಟಕ್ಕೆ ಪ್ರಶಾಂತ್ ಬಲಿಯಾಗಿದ್ದಾರೆ. 4ಜಿ ಚಿತ್ರದಲ್ಲಿ ಸಂಗೀತ ಸಂಯೋಜಕ ಹಾಗೂ ನಟ ಜಿ.ವಿ. ಪ್ರಕಾಶ್ ಕುಮಾರ್ ನಾಯಕನಾಗಿ ಅಭಿನಯಿಸಿದ್ದಾರೆ.
ಅರುಣ್ ಪ್ರಶಾಂತ್ ಅವರು ಕಾಲಿವುಡ್ಗೆ ಎಂದಿರನ್, ಐ, ಅನಿಯನ್ ಹಾಗೂ 2.0 ನಂತಹ ಅದ್ಭುತ ಚಿತ್ರಗಳನ್ನು ನೀಡಿದ ಪ್ರಖ್ಯಾತ ನಿರ್ದೇಶಕ ಶಂಕರ್ ಅವರ ಶಿಷ್ಯ. ಐ ಚಿತ್ರದಲ್ಲಿ ಶಂಕರ್ ಅವರಿಗೆ ಸಹಾಯಕ ನಿರ್ದೇಶಕರಾಗಿ ಪ್ರಶಾಂತ್ ಕೆಲಸ ಮಾಡಿದ್ದರು.
ಕೊಯಮತ್ತೂರು ಮೂಲದವರಾದ ಪ್ರಶಾಂತ್ ಕರೊನಾ ಲಾಕ್ಡೌನ್ನಿಂದಾಗಿ ಮನೆಯಲ್ಲೇ ಉಳಿದಿದ್ದರು. ಶುಕ್ರವಾರ ಕೊಯಮತ್ತೂರಿನ ಅಣ್ಣೂರಿನಲ್ಲಿರುವ ತನ್ನ ನಿವಾಸದಿಂದ ಬೈಕ್ನಲ್ಲಿ ಮೆಟ್ಟುಪಾಳ್ಯಂಗೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಬೈಕ್ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಯುವ ನಿರ್ದೇಶಕ ಪ್ರಶಾಂತ್ ಅಕಾಲಿಕ ಮರಣ ಕೇಳಿ ಆಘಾತಗೊಂಡ ಸಿನಿಮಾ ಸಮುದಾಯ ಮೃತನ ಸಾವಿಗೆ ಸಂತಾಪ ಸೂಚಿಸಿದ್ದಾರೆ. ನಿರ್ದೇಶಕ ಶಂಕರ್ ಸಹ ಟ್ವೀಟ್ ಮಾಡಿ ಕಂಬನಿ ಮಿಡಿದ್ದಿದ್ದು, ದಿಢೀರ್ ಸಾವಿನಿಂದ ಹೃದಯ ಬಿರಿದಿದೆ. ಅರುಣ್ ನೀನು ಶ್ರಮ ಜೀವಿ ಹಾಗೂ ಪಾಸಿಟಿವ್ ವ್ಯಕ್ತಿಯಾಗಿದ್ದೆ. ನಿನ್ನನ್ನು ಕಳೆದುಕೊಂಡ ಕುಟುಂಬ ಹಾಗೂ ಸ್ನೇಹಿತರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಕೇಳಿಕೊಳ್ಳುತ್ತೇನೆ ಎಂದಿದ್ದಾರೆ. (ಏಜೆನ್ಸೀಸ್)